ಸಾವಯವ ಉತ್ಪನ್ನಗಳಿಗೆ ಇನ್ನಿಲ್ಲದ ಬೇಡಿಕೆಯಿದೆ : ಎ.ಪಿ.ಸದಾಶಿವ
ವಿವೇಕಾನಂದ ಪತ್ರಿಕೋದ್ಯಮ ವಿಭಾಗದಲ್ಲಿ ಕೃಷಿ-ಖುಷಿ ಕಾರ್ಯಕ್ರಮ

ಪುತ್ತೂರು,ಡಿ.25: ಮಾನವ ಬದುಕಿಗೆ ಆಹಾರ ಅತೀ ಮುಖ್ಯವಾಗಿದ್ದು, ಪ್ರಸ್ತುತ ಕೃಷಿಗೆ ಬಳಸುವ ಕ್ರಿಮಿ ನಾಶಕಗಳಿಂದಾಗಿ ವಿಷಯುಕ್ತ ಬೆಳೆಯನ್ನು ತೆಗೆಯಲಾಗುತ್ತಿದೆ. ಪರಿಣಾಮವಾಗಿ ನಾವು ಬಳಸುವ ಆಹಾರದಲ್ಲಿ ವಿಷ ಸೇರಿ ಆರೋಗ್ಯವನ್ನು ಹಾಳು ಮಾಡುತ್ತಿದೆ. ಆರೋಗ್ಯದ ದೃಷ್ಟಿಯಿಂದ ಇಂದು ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಉತ್ಪನ್ನಕ್ಕೆ ಇನ್ನಿಲ್ಲದ ಬೇಡಿಕೆಯಿದೆ ಎಂದು ಪುತ್ತೂರು ತಾಲೂಕಿನ ಮರಿಕೆ ನಿವಾಸಿ ಪ್ರಗತಿಪರ ಸಾವಯುವ ಕೃಷಿಕ ಎ. ಪಿ. ಸದಾಶಿವ ಮರಿಕೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಶನಿವಾರ ಕಾಲೇಜ್‍ನಲ್ಲಿ ಆಯೋಜಿಸಲಾದ `ಕೃಷಿ-ಖುಷಿ' ಕಾರ್ಯಕ್ರಮದಲ್ಲಿ `ಸಾವಯವ ಕೃಷಿ - ಬದುಕಿನ ಹಾದಿ' ಎಂಬ ವಿಷಯದ ಕುರಿತು ಮಾಹಿತಿ ನೀಡಿದರು.
ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಆರಂಭದಲ್ಲಿ ಉತ್ತಮ ಇಳುವರಿ ದೊರಕಬಹುದು ಆದರೆ ಕೆಲವು ವರ್ಷಗಳ ನಂತರ ಅದು ಕೃಷಿ ಮಣ್ಣನ್ನು ವಿಷಯುಕ್ತವಾಗಿಸಿ, ಬೆಳೆ ಬೆಳೆಯಲು ಅನರ್ಹವಾಗಿಸುತ್ತದೆ. ಸಾವಯುವ ಗೊಬ್ಬರದ ಬಳಕೆ ಮಣ್ಣಿನ ಫಲವತ್ತತೆಯನ್ನು ಉಳಿಸಿ ಬೆಳೆಸುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಕೃಷಿಯಲ್ಲಿ ಕ್ರಿಮಿನಾಶಕಗಳ ಬಳಕೆ ಕಪ್ಪೆ, ಕೊಕ್ಕರೆ, ಗುಬ್ಬಚ್ಚಿ, ಕಾಗೆ ಮೊದಲಾದ ಜೀವಸಂಕುಲಗಳನ್ನು ವಿನಾಶದ ಅಂಚಿಗೆ ಕೊಂಡೊಯ್ದಿದೆ. ಪರಿಸರಕ್ಕೆ ಹಾನಿ ಮಾಡಿ ಬದುಕುವ ಹಕ್ಕು ಮನುಷ್ಯನಿಗೆ ಇಲ್ಲ ಎಂದು ನುಡಿದರು.
ಇಂದು ಎಲ್ಲೆಡೆಯೂ ನೀರಿನ ಅಭಾವ ಉಂಟಾಗಿದೆ. ಅದಕ್ಕೆ ಮೂಲ ಕಾರಣ ಕಾಡಿನ ನಾಶ, ಕೊಳವೆ ಬಾವಿಗಳು ಹಾಗೂ ಅಸಮರ್ಪಕ ಸ್ವಾಭಾವಿಕ ಜಲಸಂಪನ್ಮೂಲಗಳ ಬಳಕೆ. ಇಂಗುಗುಂಡಿಗಳು, ಸಣ್ಣ ಜರಿಗಳಿಗೆ ಅಡ್ಡಲಾಗಿ ಕಟ್ಟುವ ತಡೆಗಳು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಆದೆಆ ಬಗೆಗೆ ನಮ್ಮಲ್ಲಿ ಇನ್ನೂ ಸಾಕಷ್ಟು ಜಾಗೃತಿ ಮೂಡದಿರುವುದು ದುರ್ದೈವ. ಆಧುನಿಕ ಕೃಷಿಯಿಂದಾಗಿ ಅನೇಕ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಾ ಇದ್ದೇವೆ. ಹಿರಿಯರು ನಮಗೆ ಹಸ್ತಾಂತರಿಸಿದ ಪ್ರಕೃತಿ ಸಂಪತ್ತನ್ನು ಮುಂದಿನ ಜನಾಂಗಕ್ಕಾಗಿ ಉಳಿಸಿಕೊಡುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಸಮಗ್ರ ಕೃಷಿ ಇದ್ದಾಗ ಕೃಷಿಕನಿಗೆ ಗೆಲುವು ಸುಲಭಸಾಧ್ಯವೆನಿಸುತ್ತದೆ. ಕೃಷಿಯೂ ಇತರ ವೃತ್ತಿಯಂತೆಯೇ ಶಿಸ್ತುಬದ್ಧ ಕೆಲಸವನ್ನು ಬಯಸುತ್ತದೆ. ಆಸಕ್ತಿಯಿಂದ ಮತ್ತು ಆಲೋಚನಾಯುಕ್ತವಾಗಿ ಮಾಡುವ ಕೃಷಿ ಸೋಲನ್ನು ತರುವುದಿಲ್ಲ. ಆದರೆ ಕೃಷಿಗೆ ಪೂರಕವಾಗಿರುವ ನೀರಿನ ಬಗೆಗೆ ನಮ್ಮಲ್ಲಿ ಇನ್ನೂ ಸಾಕಷ್ಟು ಗೌರವ ಮೂಡಿಲ್ಲ. ನೀರನ್ನು ಉಳಿಸುವ, ಭೂಮಿಯಲ್ಲಿ ಇಂಗಿಸುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಆ ಹಿನ್ನೆಲೆಯಲ್ಲಿ ಸಂಘಟಿತ ಪ್ರಯತ್ನ ಸಾಗಬೇಕಿದೆ ಎಂದರು.
ಕಾಲೇಜಿನ ಸ್ನಾತ್ತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಪೂಜಾ ಪಕ್ಕಳ, ಕೃಷಿ-ಖುಷಿ ಕಾರ್ಯಕ್ರಮದ ಸಂಯೋಜಕ ಶಿವಪ್ರಸಾದ್ ರೈ ಉಪಸ್ಥಿತರಿದ್ದರು.
ಉಪನ್ಯಾಸಕಿ ಭವ್ಯ ಪಿ. ಆರ್. ನಿಡ್ಪಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸುಷ್ಮಾ ಸದಾಶಿವ್ ವಂದಿಸಿದರು. ವರ್ಷಿತಾ ಮುಡೂರು ನಿರೂಪಿಸಿದರು







