ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸದ ಶೋಭಾ ಕರಂದ್ಲಾಜೆ
ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡು ಹೊರನಡೆದ ಸಂಸದೆ

ಚಿಕ್ಕಮಗಳೂರು, ಡಿ.25: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಮಾದ್ಯಮದವರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಿಡಿಮಿಡಿಗೊಂಡು ಹೊರನಡೆದ ಪ್ರಸಂಗ ಸೋಮವಾರ ನಗರದ ಪ್ಲೆಸ್‍ಕ್ಲಬ್‍ನಲ್ಲಿ ನಡೆಯಿತು.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು "ಸಂವಿಧಾನವನ್ನು ಬದಲಿಸಬೇಕು ಹಾಗೂ ಜಾತ್ಯತೀತರಿಗೆ ಅಪ್ಪ-ಅಮ್ಮನ ಪರಿಚಯವೇ ಇಲ್ಲ’ ಎಂದಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಂಸದೆ ಶೋಭಾ ಕರಂದ್ಲಾಜೆ ‘ಇದಕ್ಕೂ ನನಗೂ ಸಂಬಂಧ ಇಲ್ಲ. ಈ ಬಗ್ಗೆ ನನ್ನನ್ನು ಕೇಳಬೇಡಿ, ಪಕ್ಷದಲ್ಲಿ ಅವರಿಗಿಂತ ನಾನು ಕಿರಿಯವಳಿದ್ದೇನೆ. ಅವರ ಹೇಳಿಕೆ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗರಂ ಆದರು.
ಮಾಧ್ಯಮದವರು ಮರು ಪ್ರಶ್ನೆ ಕೇಳುತ್ತಿದ್ದಂತೆ ಇನ್ನಷ್ಟು ಗರಂ ಆದ ಸಂಸದೆ ಶೋಭಾ ಕರಂದ್ಲಾಜೆ, "ಬೇರೆ ಮುಖಂಡರ ಬಾಯಲ್ಲಿ ಬಂದದ್ದಕ್ಕೆ ನಾನ್ಯಾಕೆ ಉತ್ತರಿಸಲಿ. ಅವರಿಗೆ ಕೇಳಿ. ನಾನು ಮಾತನಾಡುತ್ತೇನೆ. ನಾನು ನನ್ನ ಪಕ್ಷದ ವಿಚಾರವನ್ನು, ನಮ್ಮ ರಾಷ್ಟ್ರೀಯ ನಾಯಕರ ವಿಚಾರವನ್ನು ನಿಮ್ಮ ಮುಂದೆ ಸ್ಪಷ್ಟಪಡಿಸಿದ್ದೇನೆ" ಎನ್ನುತ್ತಾ ಪತ್ರಕರ್ತರ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವ ಗೋಜಿಗೆ ಹೋಗದೆ ಪತ್ರಿಕಾಗೋಷ್ಟಿಯಿಂದ ಹೊರ ನಡೆದರು.
ಇದಕ್ಕೂ ಮುಂಚೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಬಿಜೆಪಿ ಪರಿವರ್ತನಾ ಯಾತ್ರೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಚಿಕ್ಕಮಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಡಿ.30ರಂದು ಮದ್ಯಾಹ್ನ 2 ಗಂಟೆಗೆ ಆಗಮಿಸಲಿದ್ದಾರೆ. ಅಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ ಎಂದರು.
ಡಿ.29ರಂದು ಚಿಕ್ಕಮಗಳೂರು ಜಿಲ್ಲೆಗೆ ಪರಿವರ್ತನಾ ಯಾತ್ರೆ ಆಗಮಿಸಲಿದ್ದು, ಡಿ.29ರಂದು ಕೊಪ್ಪಾದಲ್ಲಿ ಕಾರ್ಯಕ್ರಮ ಮುಗಿಸಿ ಡಿ.30ರಂದು ಮೂಡಿಗೆರೆ, ಚಿಕ್ಕಮಗಳೂರು, ಕಡೂರಿನಲ್ಲಿ ಯಾತ್ರೆ ನಡೆಯಲಿದೆ ಎಂದು ವಿವರ ನೀಡಿದರು.







