ವಾಜಪೇಯಿಗೆ 93ನೇ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಹೊಸದಿಲ್ಲಿ, ಡಿ.25: ಕಾಂಗ್ರೆಸೇತರ ಪ್ರಧಾನಿಯಾಗಿ ಐದು ವರ್ಷಗಳ ಕಾರ್ಯಾವಧಿ ಪೂರೈಸಿದ ಪ್ರಪ್ರಥಮ ಹಾಗೂ ಏಕೈಕ ಪ್ರಧಾನಿಯಾಗಿರುವ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಭಾಶಯ ಕೋರಿದ್ದಾರೆ.
“ವಾಜಪೇಯಿಯವರು ತಮ್ಮ ಅಸಾಧಾರಣ ಮತ್ತು ದಾರ್ಶನಿಕ ಮುಖಂಡತ್ವದಿಂದ ಭಾರತದ ಅಭಿವೃದ್ಧಿ ಗತಿಯನ್ನು ಹೆಚ್ಚಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದವರು. ಅವರ ಆರೋಗ್ಯಸ್ಥಿತಿ ಉತ್ತಮಗೊಳ್ಳಲಿ ಎಂದು ಹಾರೈಸುವುದಾಗಿ” ಮೋದಿ ಟ್ವೀಟ್ ಮಾಡಿದ್ದಾರೆ.
ವಾಜಪೇಯಿಯವರು ಬರೆದ ಕವಿತೆಯೊಂದನ್ನು ಪೋಸ್ಟ್ ಮಾಡುವ ಮೂಲಕ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಭಾಷಯ ಸಲ್ಲಿಸಿದ್ದಾರೆ. ಲಕ್ನೊ ಕ್ಷೇತ್ರದಿಂದ 1991,1996,1998, 1999 ಮತ್ತು 2004ರಲ್ಲಿ ಸಂಸದನಾಗಿ ಆಯ್ಕೆಯಾಗಿದ್ದ ವಾಜಪೇಯಿ 1998ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಭಾರತದ 10ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 1924ರಲ್ಲಿ ಜನಿಸಿದ್ದ ವಾಜಪೇಯಿ, 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದರು.1977-79ರ ಅವಧಿಯಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಸಂದರ್ಭ ವಿದೇಶ ವ್ಯವಹಾರ ಸಚಿವರಾಗಿದ್ದ ವಾಜಪೇಯಿ, ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಪ್ರಪ್ರಥಮ ವಿದೇಶ ವ್ಯವಹಾರ ಸಚಿವ ಎಂದೆನಿಸಿದ್ದರು.







