ಸಮಿತಿ ರಚನೆಗೆ ಸ್ವಾಮೀಜಿಗಳ ವಿರೋಧ: ಬಸವರಾಜ ಹೊರಟ್ಟಿ ಅಸಮಾಧಾನ
ಬೆಂಗಳೂರು, ಡಿ. 25: ಲಿಂಗಾಯತ ಸ್ವತಂತ್ರ್ಯ ಧರ್ಮ ಮಾನ್ಯತೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವೀರಶೈವ ಮಹಾಸಭಾ, ಪಂಚಪೀಠ ಸ್ವಾಮೀಜಿಗಳು, ವೀರಶೈವ -ಲಿಂಗಾಯತರು ಒಂದೇ ಎನ್ನುವುದಕ್ಕೆ ದಾಖಲೆ ಒದಗಿಸಲಿ, ಅದು ಬಿಟ್ಟು ಲಿಂಗಾಯತ ಸ್ವತಂತ್ರ ಧರ್ಮ ರಚನೆ ಸಮಿತಿ ರದ್ದು ಮಾಡಬೇಕೆಂದು ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಸಂಚಾಲಕ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವೀರಶೈವ ಮಹಾಸಭಾ, ಪಂಚಪೀಠ ಸ್ವಾಮೀಜಿಗಳ ಬಳಿ ಯಾವುದೇ ದಾಖಲೆಗಳಿಲ್ಲ. ಅವರ ಅರ್ಜಿ ತಿರಸ್ಕೃತವಾಗುತ್ತದೆ ಎಂಬ ಭಯದಿಂದ ಸಮಿತಿ ರಚನೆ ರದ್ಧತಿಗೆ ಒತ್ತಾಯಿಸುತ್ತಿದ್ದಾರೆ ಎಂದರು.
ಲಿಂಗಾಯತ ಸ್ವತಂತ್ರ ಧರ್ಮ ರಚನೆ ಸಂಬಂಧ ವೀರಶೈವ ಮಹಾಸಭಾ, ಪಂಚಪೀಠಾಧೀಶರ ಅರ್ಜಿಗಳು ಸೇರಿದಂತೆ ಸರಕಾರಕ್ಕೆ 5 ಅರ್ಜಿಗಳು ಬಂದಿವೆ .ಇವುಗಳನ್ನು ಪರಿಶೀಲಿಸಿ ಇತ್ಯರ್ಥಗೊಳಿಸಲು ಸರಕಾರ ಸಮಿತಿ ರಚನೆ ಮಾಡಿದೆ. ಹೀಗಿರುವಾಗ ಸಮಿತಿ ರದ್ದು ಮಾಡಬೇಕೆಂದು ಸ್ವಾಮೀಜಿಗಳು ಆಗ್ರಹಿಸುತ್ತಿರುವುದು ಸರಿಯಲ್ಲ ಎಂದರು.
ಸರಕಾರ ರಚನೆ ಮಾಡಿರುವ ಸಮಿತಿಯಲ್ಲಿ ಪರಿಣಿತರಿದ್ದಾರೆ, ನಿವೃತ್ತ ನ್ಯಾಯಾಧೀಶರಿದ್ದಾರೆ, ಅವರು ಎಲ್ಲವನ್ನೂ ಅಧ್ಯಯನ ಮಾಡಿ ವರದಿ ನೀಡುತ್ತಾರೆ. ಪರಿಣಿತರ ಸಮಿತಿ ನೀಡುವ ವರದಿಯನ್ನು ಅಲ್ಪ ಸಂಖ್ಯಾತರ ಆಯೋಗ ಪರಿಶೀಲಿಸಿ ಶಿಫಾರಸ್ಸು ಮಾಡುತ್ತದೆ. ಇದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಬಹುದು. ಅದು ಬಿಟ್ಟು ಸಮಿತಿ ರದ್ದುಗೊಳಿಸುವಂತೆ ಒತ್ತಾಯಿಸುವುದು ಅರ್ಥಹೀನ ಎಂದರು.
ಮಹಾರಾಷ್ಟ್ರದಲ್ಲಿ ಲಿಂಗಾಯತ ಪತ್ಯೇಕ ಧರ್ಮ ಸಂಬಂಧ ಸಮಿತಿ ರಚನೆ ಮಾಡಿ ಲಿಂಗಾಯತ ಧರ್ಮದ ಮಾನ್ಯತೆಗೆ ಶಿಫರಸ್ಸು ಮಾಡಿದ್ದು ಸಂಪುಟದಲ್ಲೂ ಒಪ್ಪಿಗೆಯಾಗಿದೆ. ಬಿಜೆಪಿ ಶಾಸಕರೆ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದ ಅವರು, ಸಮಿತಿ ಮುಂದೆ ನಾವು ದಾಖಲೆ ನೀಡಲು ಸಿದ್ಧರಿದ್ದೇವೆ. ಪಂಚ ಪೀಠಾಧೀಶರ ಬಳಿ ದಾಖಲೆಗಳಿದ್ದರೆ ಸಲ್ಲಿಸಲಿ. ಇಲ್ಲವಾದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಹೊರಟ್ಟಿ ಸವಾಲು ಹಾಕಿದರು.
ಮೊನ್ನೆ ನಡೆದ ಸಮಾವೇಶದಲ್ಲಿ ಆಂದೋಲನ ಸ್ವಾಮೀಜಿ, ವಿನಯ್ ಕುಲಕರ್ಣಿ, ಎ.ಬಿ ಪಾಟೀಲ್, ಹೊರಟ್ಟಿ 3 ಈಡಿಯೆಟ್ಸ್ ಎಂದು ಸ್ವಾಮೀಜಿಯೊಬ್ಬರು ಹೇಳಿಕೆ ನೀಡಿದ್ದು ಇದು ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಎಂ.ಎಸ್.ಜಾಮದಾರ್, ಡಾ.ಜಯಣ್ಣ ಸೇರಿದಂತೆ ಇತರರು ಇದ್ದರು.
ಬಿಜೆಪಿ ಬೆಂಬಲಿಗ ಸ್ವಾಮೀಜಿಗಳು ಸ್ವತಂತ್ರ ಧರ್ಮಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇಂತಹವರು ಪ್ರಧಾನಿ ಮೇಲೆ ಒತ್ತಡ ಹೇರಿ ವೀರಶೈವ-ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆದುಕೊಂಡು ಬರಲಿ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ







