ರಾಜಕಾರಣಿ ಮತ್ತು ಅಧಿಕಾರಿಗಳ ಹೊಂದಾಣಿಕೆ ಅಕ್ರಮ ಸಂಪತ್ತು ಗಳಿಕೆಗೆ ಸೀಮಿತವಾಗಬಾರದು: ಡಿ.ವಿ.ಸದಾನಂದಗೌಡ
"ರಾಜಕೀಯ ಉದ್ಯಮವಾಗಿದೆ"

ಬೆಂಗಳೂರು, ಡಿ. 25: ರಾಜಕೀಯ ಎಂಬುದು ಬಂಡವಾಳ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳುವ ಉದ್ಯಮವಾಗಿದೆ. ದುಡ್ಡು ಕೊಡದಿದ್ದರೆ ಚುನಾವಣೆಯಲ್ಲಿ ಟಿಕೆಟ್ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಉತ್ತಮ ಆಡಳಿತ ದಿನ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿನ ಆದ್ಯತೆಗಳನ್ನು ಗುರುತಿಸುವುದು, ವೃತ್ತಿಪರತೆ, ಅಂತಃಕರಣ, ದೂರದೃಷ್ಟಿತ್ವ ಮತ್ತು ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಡುವಿನ ಹೊಂದಾಣಿಕೆ ಉತ್ತಮ ಆಡಳಿತ ಎಂದರೆ 5 ಪ್ರಮುಖ ಅಂಶಗಳು ಎಂದು ಪ್ರತಿಪಪಾದಿಸಿದರು.
ಬುದ್ಧಿವಂತರಾದವರೆ ಈ ರೀತಿಯ ದುರಾಸೆಗೆ ಬಲಿಯಾಗುತ್ತಿದ್ದಾರೆ. ರಾಜಕಾರಣಿ ಎಂದರೆ ಅದು ಲಾಭಕ್ಕಾಗಿ ಹೂಡಿಕೆ ಮಾಡುವುದು ಎಂಬ ವಾತಾವರಣ ನಿರ್ಮಾಣವಾಗಿದೆ. 20 ಕೋಟಿ ಬಂಡವಾಳ ಹಾಕಿ ಅಧಿಕಾರ ಮುಗಿಯುವ ವೇಳೆಗೆ 50 ಕೋಟಿ ಮಾಡಿಕೊಳ್ಳುವುದು ಎಂಬಂತಹ ಸ್ಥಿತಿ ಇದೆ. ಚುನಾವಣೆಗೆ ಖರ್ಚು ಮಾಡಲು ದುಡ್ಡು ಬೇಕು. ಟಿಕೆಟ್ ಗಳಿಸಲೂ ದುಡ್ಡು ಕೊಡಬೇಕು. ಹೀಗಿರುವಾಗ ಸಮಾಜದ ನೈತಿಕತೆಯನ್ನು ನಾವು ವಿಶ್ಲೇಷಿಸಬೇಕಿದೆ ಎಂದು ನುಡಿದರು.
ಸಾವಿರಾರು ವರ್ಷಗಳ ಹಿಂದೆ ಯಶಸ್ವಿ ದೇಶವಾಗಿದ್ದ ಭಾರತ, ಬ್ರಿಟಿಷರ ದಾಸ್ಯಕ್ಕೊಳಗಾದಾಗ ಮನೆ ಮಂದಿಯೆಲ್ಲಾ ಸ್ವಾತಂತ್ರ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದರು. ಹಲವಾರು ಮಂದಿಯ ತ್ಯಾಗ, ಬಲಿದಾನದಿಂದ ಸ್ವತಂತ್ರ ಸಿಕ್ಕಿದೆ. ಎಲ್ಲರೂ ಮಹಾತ್ಮಾಗಾಂಧಿ, ಸುಭಾಷ್ ಚಂದ್ರ ಬೋಸ್‌ರಂತಾಗಲು ಸಾಧ್ಯವಿಲ್ಲ. ಆದರೆ, ಅವರ ಆದರ್ಶಗಳನ್ನು ಸ್ವಲ್ಪಮಟ್ಟಿಗೆ ಅಳವಡಿಸಿಕೊಂಡರೆ ಸಾಕು. ರಾಜಕಾರಣಿ ಮತ್ತು ಅಧಿಕಾರಿಗಳ ಹೊಂದಾಣಿಕೆ ಅಕ್ರಮ ಸಂಪತ್ತು ಗಳಿಕೆಗೆ ಸೀಮಿತವಾಗಬಾರದು ಎಂದು ಹೇಳಿದರು.







