ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

ಬೆಂಗಳೂರು, ಡಿ.25: ತಿಂಗಳ ಹಿಂದೆ ವಿವಾಹವಾಗಿದ್ದ ದಂಪತಿಯು ಕೆಂಗೇರಿಯ ಮೈಲಸಂದ್ರದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯದ ಚನ್ನಸಂದ್ರದ ಪ್ರವೀಣ್(24) ಹಾಗೂ ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾಗಿದ್ದ ಪ್ರಿಯಾ(19) ಎಂಬುವವರು ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಒಂದು ತಿಂಗಳ ಹಿಂದೆ ಪ್ರವೀಣ್ ಹಾಗೂ ಪ್ರಿಯಾ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ನ.2 ರಂದು ವಿವಾಹವಾಗಿದ್ದರು. ಮೈಲಸಂದ್ರದಲ್ಲಿ ಪ್ರತ್ಯೇಕ ಮನೆ ಮಾಡಿದ್ದ ಅವರು ಅಲ್ಲಿಯೇ ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡಿದ್ದರು.
ಪ್ರಿಯಾ ಅವರ ತಾಯಿ, ರವಿವಾರ ಬೆಳಗ್ಗೆಯಿಂದ ಫೋನ್ ಕರೆ ಮಾಡಿದರೂ ಮಗಳು ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ತಾಯಿ ಮಗಳ ಮನೆಗೆ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಬಳಿಕ ಠಾಣೆಗೆ ಮಾಹಿತಿ ನೀಡಿದರು ಎಂದು ಕೆಂಗೇರಿ ಪೊಲೀಸರು ಹೇಳಿದ್ದಾರೆ.
ಗಂಡ ಮತ್ತು ಹೆಂಡತಿ ಅನ್ಯೋನ್ಯವಾಗಿಯೇ ಇದ್ದರು. ಆರ್ಥಿಕ ಸಮಸ್ಯೆಯೂ ಇರಲಿಲ್ಲ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನಿಖರವಾಗಿ ಗೊತ್ತಿಲ್ಲ ಎಂದು ಮೃತರ ಪೋಷಕರು ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.







