ವ್ಯವಹಾರದಲ್ಲಿ ಪಾರದರ್ಶಕತೆಯ ಉದ್ದೇಶ : ಬ್ಯಾಂಕ್ ಖಾತೆ ತೆರೆಯಲು ಎನ್ಜಿಒಗಳಿಗೆ ಸರಕಾರದ ಆದೇಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಡಿ.25: ಅತ್ಯುನ್ನತ ಮಟ್ಟದ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ , ವಿದೇಶದಿಂದ ಬಂಡವಾಳ ಸಂಗ್ರಹಿಸುವ ಎಲ್ಲಾ ವ್ಯಾಪಾರಿ ಸಂಸ್ಥೆಗಳು ಹಾಗೂ ಎನ್ಜಿಒಗಳು 32 ನಿಯೋಜಿತ ಬ್ಯಾಂಕ್ಗಳ ಪೈಕಿ ಯಾವುದಾದರೂ ಒಂದರಲ್ಲಿ ಖಾತೆ ತೆರಯಬೇಕೆಂದು ಸರಕಾರ ಸೂಚನೆ ನೀಡಿದೆ.
ಅಲ್ಲದೆ ಈ ರೀತಿ ಸಂಗ್ರಹಿಸಲಾದ ಹಣವು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಲ್ಲದ ಕಾರ್ಯಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಎನ್ಜಿಒಗಳು (ಸರಕಾರೇತರ ಸಂಘಟನೆಗಳು), ಸಂಸ್ಥೆಗಳು ಹಾಗೂ ವ್ಯಕ್ತಿಗಳು ಬ್ಯಾಂಕ್ಗಳಲ್ಲಿ ‘ವಿದೇಶಿ ದೇಣಿಗೆ ಖಾತೆ’ಗಳನ್ನು ತೆರೆಯಬೇಕು. ಇದರಿಂದ ಕೇಂದ್ರ ಸರಕಾರದ ‘ಸಾರ್ವಜನಿಕ ಆರ್ಥಿಕ ನಿರ್ವಹಣಾ ವ್ಯವಸ್ಥೆ(ಪಿಇಎಂಸಿ)ಯ’ ಅನುಪಾಲನೆ ಸುಲಭವಾಗುತ್ತದೆ ಹಾಗೂ ಉನ್ನತ ಮಟ್ಟದ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ(ಎಫ್ಸಿಆರ್ಎ) 2010ರ ಪ್ರಕಾರ ವಿದೇಶದಿಂದ ಹಣ ಸ್ವೀಕರಿಸುವ ವ್ಯಕ್ತಿ ಅಥವಾ ಸಂಘಟನೆಗಳು ಈ ಹಣ ರಾಷ್ಟ್ರದ ಹಿತಾಸಕ್ತಿಗೆ ಪೂರಕವಲ್ಲದ ಕಾರ್ಯಗಳಿಗೆ ಬಳಕೆಯಾಗದಂತೆ ಎಚ್ಚರ ವಹಿಸಬೇಕು.
ಆದ್ದರಿಂದ ಎಫ್ಸಿಆರ್ಎ ಕಾಯ್ದೆಯ ಅಧಿಕಾರ ಬಳಸಿಕೊಂಡು, ವಿದೇಶದಿಂದ ದೇಣಿಗೆ ಸ್ವೀಕರಿಸುವ ಎಲ್ಲಾ ವ್ಯಕ್ತಿ ಅಥವಾ ಸಂಘಟನೆಗಳೂ 32 ಬ್ಯಾಂಕ್ಗಳ ಪೈಕಿ ಒಂದು ಅಥವಾ ಹೆಚ್ಚು ಬ್ಯಾಂಕ್ಗಳಲ್ಲಿ ಖಾತೆ ತೆರೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತು ನಿರ್ದಿಷ್ಟ ಫಾರಂನಲ್ಲಿ ಮಾಹಿತಿ ತುಂಬಿ 21-01-2018ರ ಒಳಗೆ ಸರಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಕೆಲವು ಬ್ಯಾಂಕ್ಗಳು ಈಗಾಗಲೇ ತಮ್ಮ ವ್ಯವಸ್ಥೆಗಳನ್ನು ಪಿಇಎಂಸಿ ಜೊತೆ ಸಂಘಟಿತಗೊಳಿಸಿವೆ. ಆದರೆ ಇನ್ನೂ ಕೆಲವು ಬ್ಯಾಂಕ್ಗಳು ನಿರಂತರ ಸೂಚನೆ ನೀಡಿದ್ದರೂ ಇನ್ನೂ ಈ ಕಾರ್ಯ ಮಾಡಿಲ್ಲ ಎಂದು ಸರಕಾರ ತಿಳಿಸಿದೆ.
ಅಬುಧಾಬಿ ಕಮರ್ಷಿಯಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ದಿ ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯನ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಶನ್ ಬ್ಯಾಂಕ್, ಕಣ್ಣೂರು ವೈಶ್ಯ ಬ್ಯಾಂಕ್, ತಮಿಳುನಾಡು ಮರ್ಕಂಟೈಲ್ ಬ್ಯಾಂಕ್, ದಿ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಯುಕೊ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್ ,ಸಿಂಡಿಕೇಟ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ದಿ ಜಮ್ಮು-ಕಾಶ್ಮೀರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಅಲಹಾಬಾದ್ ಯುಪಿ ಗ್ರಾಮೀಣ ಬ್ಯಾಂಕ್, ಡಿಸಿಬಿ ಬ್ಯಾಂಕ್, ಮಣಿಪುರ್ ಸ್ಟೇಟ್ ಕೊ-ಆಪರೇಟಿವ್ ಬ್ಯಾಂಕ್, ವಿಜಯಾ ಬ್ಯಾಂಕ್, ಬಾಂಬೆ ಮರ್ಕಂಟೈಲ್ ಕೊ-ಆಪ್ ಬ್ಯಾಂಕ್, ಯೆಸ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್,ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್- ಇವು ನಿಯೋಜಿತ ಬ್ಯಾಂಕ್ಗಳಾಗಿವೆ.
ವಿತ್ತ ಸಚಿವಾಲಯದ ಮಹಾಲೆಕ್ಕ ನಿಯಂತ್ರಕರ ಅಧೀನದಲ್ಲಿ ಕಾರ್ಯಾಚರಿಸುವ ಪಿಎಫ್ಎಮ್ಎಸ್ ಎಲ್ಲಾ ಕಾರ್ಯ ಯೋಜನೆಗಳಿಗೆ ಆರ್ಥಿಕ ನಿರ್ವಹಣೆಯ ಆಧಾರವನ್ನು ಒದಗಿಸುತ್ತದೆ.
ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವಂತೆ ಈ ವರ್ಷದ ಆರಂಭದಲ್ಲಿ ಗೃಹ ಸಚಿವಾಲಯವು ಸುಮಾರು 9,000 ಎನ್ಜಿಒಗಳು ಹಾಗೂ ಇತರ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎನ್ಜಿಒ ಸಂಸ್ಥೆಗಳ ಕುರಿತಾದ ನಿಯಮಗಳನ್ನು ಬಿಗಿಗೊಳಿಸಿದೆ ಹಾಗೂ ಎಫ್ಸಿಆರ್ಎ 2010 ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
2011ರಿಂದ 2017ರ ಅವಧಿಯಲ್ಲಿ ಕಾನೂನು ಉಲ್ಲಂಘಿಸಿದ 18,868 ಎನ್ಜಿಒ ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸಿರುವುದಾಗಿ ಕಳೆದ ವಾರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಎನ್ಜಿಒ ಸಂಸ್ಥೆಗಳಿಗೆ ವಿದೇಶದಿಂದ ಬರುತ್ತಿರುವ ದೇಣಿಗೆಯ ಮೊತ್ತದಲ್ಲೂ ಗಮನಾರ್ಹ ಇಳಿಕೆ ಕಂಡುಬಂದಿದ್ದು, 2015-16ರಲ್ಲಿ 17,773 ಕೋಟಿ ರೂ. ಮೊತ್ತದ ದೇಣಿಗೆ ಬಂದಿದ್ದರೆ, 2016-17ರಲ್ಲಿ ಈ ಮೊತ್ತ 6,499 ಕೋಟಿ ರೂ.ಗೆ ಇಳಿಕೆಯಾಗಿದೆ. ದೇಶದಲ್ಲಿ ಈಗ ಸುಮಾರು 10,000ದಷ್ಟು ಎಫ್ಸಿಆರ್ಎ ನೋಂದಾಯಿತ ಎನ್ಜಿಒ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ.







