ಜಾಧವ್‌ಗೆ ದೂತಾವಾಸ ಸಂಪರ್ಕಕ್ಕೆ ಅವಕಾಶ ನೀಡಿರಲಿಲ್ಲ: ಪಾಕಿಸ್ತಾನ

ಇಸ್ಲಮಾಬಾದ್,ಡಿ.25: ಕುಲಭೂಷಣ್ ಜಾಧವ್‌ಗೆ ತಾನು ದೂತಾವಾಸ ಸಂಪರ್ಕದ ಅವಕಾಶವನ್ನು ಒದಗಿಸಿದ್ದೇನೆ ಎಂದು ರವಿವಾರವಷ್ಟೇ ಹೇಳಿಕೊಂಡಿದ್ದ ಪಾಕಿಸ್ತಾನವು ಸೋಮವಾರ ತನ್ನ ಹೇಳಿಕೆಯಿಂದ ಹಿಂದೆ ಸರಿದಿದೆ. ಜಾಧವ್ ಅವರು ಸೋಮವಾರ ಇಲ್ಲಿಯ ವಿದೇಶಾಂಗ ಕಚೇರಿಯಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿಯಾದ ಬಳಿಕ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಝಲ್ ಅವರು, ಅದೊಂದು ಮಾನವೀಯ ನೆಲೆಯ ಭೇಟಿಯಾಗಿತ್ತು ಮತ್ತು ಜಾಧವ್‌ಗೆ ದೂತಾವಾಸ ಸಂಪರ್ಕವನ್ನು ಮಂಜೂರು ಮಾಡಿರಲಿಲ್ಲ ಎಂದು ತಿಳಿಸಿದರು.
1963ರ ವಿಯೆನ್ನಾ ನಿರ್ಣಯದಂತೆ ಯಾವುದೇ ದೇಶದ ಪ್ರಜೆಗಳು ವಿದೇಶಗಳಲ್ಲಿ ಬಂಧಿಸಲ್ಪಟ್ಟರೆ ಅವರು ಅಲ್ಲಿರುವ ತಮ್ಮ ದೇಶದ ರಾಯಭಾರಿ ಕಚೇರಿಗಳ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶವನ್ನು ನೀಡಬೇಕಾಗುತ್ತದೆ.
ಭಾರತೀಯ ಉಪ ರಾಯಭಾರಿ ಜೆ.ಪಿ.ಸಿಂಗ್ ಅವರು ಉಪಸ್ಥಿತರಿದ್ದು, ಅವರು ಭೇಟಿಯನ್ನು ನೋಡಬಹುದಾಗಿತ್ತು. ಆದರೆ ಜಾಧವ್‌ರನ್ನು ಭೇಟಿಯಾಗಲು ಅವರಿಗೆ ಅವಕಾಶ ನೀಡಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಫೈಝಲ್, ಜಾಧವ್ ಕೋರಿಕೆಯ ಮೇರೆಗೆ ನಾವು ಭೇಟಿಯ ಅವಧಿಯನ್ನು 10 ನಿಮಿಷ ಹೆಚ್ಚಿಸಿದ್ದೆವು ಎಂದು ತಿಳಿಸಿದರು.
ಭೇಟಿಯ ಸಂದರ್ಭದಲ್ಲಿ ಭದ್ರತಾ ಕಾರಣಗಳಿಂದ ಜಾಧವ್ ಮತ್ತು ಅವರ ಕುಟುಂಬದ ನಡುವೆ ಗಾಜಿನ ಪರದೆಯನ್ನು ಅಳವಡಿಸಲಾಗಿತ್ತು ಮತ್ತು ನಾವು ಈ ವಿಷಯ ವನ್ನು ಅವರಿಗೆ ಮೊದಲೇ ತಿಳಿಸಿದ್ದೆವು ಎಂದರು.
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಗೆಲ್ಲುವುದು ಈ ಭೇಟಿಗೆ ಅವಕಾಶ ನೀಡಿದ್ದರ ಉದ್ದೇಶವಾಗಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬಿಂಬಿಸಲು ಹೆಣಗಾಡಿದ ಫೈಝಲ್, ಅದೊಂದು ಮಾನವೀಯತೆಯ ಕ್ರಮವಾಗಿತ್ತು ಎಂದು ಪ್ರತಿಪಾದಿಸಿದರು. ಆದರೆ ಇದು ಮಾನವೀಯ ಪರಿಗಣನೆಗಿಂತ ಹೆಚ್ಚಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಒತ್ತಡದ ಫಲಶ್ರುತಿಯಾಗಿದೆ ಎಂದು ಶಂಕಿಸಲಾ ಗಿದೆ.
ಪಾಕ್‌ಗೆ ಕೃತಜ್ಞತೆ ಸಲ್ಲಿಸಿದ ಜಾಧವ್
ಪಾಕಿಸ್ತಾನವು ಸೋಮವಾರ ಹೊಸ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದ್ದು, ಬಂಧನದಲ್ಲಿರುವ ಜಾಧವ್ ತನ್ನ ಪತ್ನಿ ಮತ್ತು ತಾಯಿಯನ್ನು ಭೇಟಿಯಾಗಲು ಅವಕಾಶ ನೀಡಿದ್ದಕ್ಕಾಗಿ ಪಾಕ್‌ಗೆ ಕೃತಜ್ಞತೆ ಸಲ್ಲಿಸುತ್ತಿರುವ ದೃಶ್ಯವನ್ನು ಅದು ಒಳಗೊಂಡಿದೆ.
ಕುಟುಂಬದೊಂದಿಗೆ ಭೇಟಿಗೆ ಮುನ್ನ ಚಿತ್ರೀಕರಿಸಿದಂತಿರುವ ವೀಡಿಯೊದಲ್ಲಿ ಜಾಧವ್, ‘ನನ್ನ ಪತ್ನಿ ಮತ್ತು ತಾಯಿ ಜೊತೆಗೆ ಭೇಟಿಗೆ ನಾನು ಕೋರಿಕೊಂಡಿದ್ದೆ. ಇದಕ್ಕೆ ಅವಕಾಶ ಕಲ್ಪಿಸಿರುವುದಕ್ಕಾಗಿ ನಾನು ಪಾಕ್ ಸರಕಾರಕ್ಕೆ ಕೃತಜ್ಞನಾಗಿದ್ದೇನೆ ’ಎಂದು ಹೇಳಿದ್ದಾರೆ.







