ಕರಿಕಾಲ್ ಚರ್ಚ್‍ಗೆ ಭೇಟಿ ನೀಡಿ ಕ್ರಿಸ್ಮಸ್ ಶುಭಾಶಯ ಕೋರಿದ ಜಮಾಅತ್ ನಿಯೋಗ
ಭಟ್ಕಳ,ಡಿ.25: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾರನ್ನೊಳಗೊಂಡ ನಿಯೋಗವು ಕ್ರಿಸ್ಮಸ್ ದಿನವಾದ ಸೋಮವಾರ ತಾಲೂಕಿನ ಕರಿಕಾಲ್ ಚರ್ಚ್‍ಗೆ ಸೌಹಾರ್ಧ ಭೇಟಿ ನೀಡುವುದರ ಮೂಲಕ ಚರ್ಚ್ನ ಫಾದರ್ ಹಾಗೂ ಕ್ರೈಸ್ತ ಸಮುದಾಯಕ್ಕೆ ಕ್ರಿಸ್ಮಸ್ ಶುಭಾಶಯವನ್ನು ಕೋರಿದರು.
ನಂತರ ಮಾತನಾಡಿದ ಅವರು ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದು ಇದರ ಸೌಂದರ್ಯವು ಎಲ್ಲರೂ ಬೆರೆತು ಒಂದಾಗಿ ಬಾಳುವುದರಲ್ಲಿ ಅಡಗಿದೆ. ಹಬ್ಬಗಳ ಸಂದರ್ಭದಲ್ಲಿ ಪರಸ್ಪರ ಶುಭಾಶಯಗಳನ್ನು ಹೇಳುವುದರ ಮೂಲಕ ನಮ್ಮ ದೇಶ ತನ್ನ ಸಂಸ್ಕೃತಿಯನ್ನು ಇನ್ನೂ ಮರೆತಿಲ್ಲ ಎಂದು ಹೇಳಿದರು.
ಹಿಂದೂ, ಮುಸ್ಲಿಮ್ ಕ್ರೈಸ್ತರು ಪರಸ್ಪರ ಒಟ್ಟಾಗಿ ಹಬ್ಬಗಳನ್ನು ಆಚರಿಸಬೇಕು.ಧರ್ಮದ ತಿರುಳು ಸಮಾಜದಲ್ಲಿ ಶಾಂತಿ,ಸೌಹಾರ್ಧತೆ ನೆಲೆಸುವಂತೆ ಮಾಡುವುದಾಗಿದ್ದು ಪರಸ್ಪರರು ಇತರರ ಧರ್ಮವನ್ನು ಅರಿತು ಅದನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಮುಹಮ್ಮದ್ ಅಶ್ರಫ್ ಬರ್ಮಾವರ್, ಮೌಲಾನ ಅಬ್ದುಲ್ಲಾ ರಬಿ ಖಲಿಫಾ, ಮುಹಮ್ಮದ್ ರಝಾ ಮಾನ್ವಿ ಮತ್ತಿತರರು ಉಪಸ್ಥಿತಿರಿದ್ದರು.





