ಅನ್ಯಾಯ, ದೌರ್ಜನ್ಯದ ವಿರುದ್ಧ ರೂಪಗೊಂಡಿದ್ದು ಭಕ್ತಿ ಚಳವಳಿ: ಡಾ.ಅಜಯ್ ಕುಮಾರ ಸಿಂಗ್
.jpg)
ಬೆಂಗಳೂರು, ಡಿ.25: ಭಕ್ತಿ ಚಳವಳಿ ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯದ ವಿರುದ್ಧವಾಗಿ ರೂಪಗೊಂಡಿದ್ದಾಗಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಅಜಯ್ ಕುಮಾರ ಸಿಂಗ್ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಸೋಮವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ‘ಭಾರತೀಯ ಭಕ್ತಿ ಚಳವಳಿಗಳು’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದಲ್ಲಿ ಭಕ್ತಿ ಚಳವಳಿ ವಿಶೇಷ ಸ್ಥಾನ ಪಡೆದಿದೆ. ಇಲ್ಲಿನ ಸಾಮಾಜಿಕ, ಧಾರ್ಮಿಕ ವಿಚಾರದಲ್ಲಿ ಸಾಕಷ್ಟು ಸಹಾಯಕವಾಗಿದೆ ಎಂದು ತಿಳಿಸಿದರು.
ಇಂದು ಭಕ್ತಿ ಹೆಸರಿನಲ್ಲಿ ನಡೆಯುವ ಕೆಲ ಸಂಗತಿಗಳೂ ನಾಚಿಕೆ ಹುಟ್ಟಿಸುತ್ತವೆ. ಭಕ್ತಿ ಪರಂಪರೆ ಎಂಬುದು ಶುದ್ಧರೂಪದಲ್ಲಿ ಪ್ರತಿಷ್ಠಾಪನೆ ಆಗಬೇಕಿದೆ. ಭಕ್ತಿ ಪರಂಪರೆ ಕ್ರಾಂತಿ ನಿರ್ಮಿಸಬಲ್ಲದು ಎಂಬುದಕ್ಕೆ ವಚನ ಸಾಹಿತ್ಯ ಉದಾಹರಣೆ ಆಗಿದೆ. ವಚನಸಾಹಿತ್ಯದಿಂದಲೇ ಬದುಕಿಗೆ ಅರ್ಥ ಬಂದಿದೆ ಎಂದು ಹೇಳಿದರು. ವಿಮರ್ಶಕ ಡಾ.ಸಿ.ವೀರಣ್ಣ ಮಾತನಾಡಿ, ವಚನ ಚಳವಳಿ ಒಂದು ಧರ್ಮದ ಚೌಕಟ್ಟಿಗೆ ಸೀಮಿತವಾಗಲಿಲ್ಲ. ಪರ್ಯಾಯ ಸಂಸ್ಕೃತಿಯೊಂದನ್ನು ಕಟ್ಟುವ ಮೂಲ ಆಶಯವನ್ನು ಹೊಂದಿತ್ತು. ಪ್ರಸ್ತುತ ಲಿಂಗಾಯತ-ವೀರಶೈವ ವಿಚಾರಗಳ ಬಗ್ಗೆ ಚರ್ಚೆಗಳಿವೆ. ಲಿಂಗಾಯತ ಪರ್ಯಾಯ ಸಂಸ್ಕೃತಿಯನ್ನು ಪ್ರತಿಪಾದಿಸಿದರೆ. ವೀರಶೈವ ಯಥಾಸ್ಥಿತಿಯನ್ನು ಪ್ರತಿಪಾದಿಸುತ್ತದೆ ಎಂದರು.
ಎಲ್ಲ ಭಕ್ತಿ ಪಂಥಗಳನ್ನು ಚಳವಳಿಗಳನ್ನಾಗಿ ನೋಡಬೇಕಾಗಿಲ್ಲ. ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳ ನೆಲೆಗಳು ಬೇರೆಯಾಗಿವೆ ಎಂದು ಹೇಳಿದರು. ಬುದ್ಧನ ಯೋಚನೆಯಲ್ಲಿ ದೇವರು, ಭಕ್ತಿಗೆ ಸ್ಥಾನವಿರಲಿಲ್ಲ. ವೈದಿಕ ಪರಂಪರೆಯನ್ನು ವಿರೋಧಿಸಿದ್ದ ಸಿಖ್ ಧರ್ಮ ಮತ್ತೆ ವೈದಿಕ ಧರ್ಮಕ್ಕೆ ಮರಳಿದೆ. ಬೌದ್ಧ ಧರ್ಮದಲ್ಲಿಯೂ ಅಂತಹದೇ ಆಚರಣೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಕಾಣಲಾಗುತ್ತಿದೆ ಎಂದು ಹೇಳಿದರು. ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮೇಖರ್ ಮಾತನಾಡಿ, ಜಡತ್ವದಿಂದ ಚಲನಶೀಲತೆ, ಚಿಂತನೆ, ವಿವೇಕದೆಡೆ ಸಾಗುವುದು ಭಕ್ತಿ ಚಳವಳಿಯಾಗಿದೆ. ಸ್ಥಾವರದಿಂದ ಜಂಗಮದೆಡೆಗೆ ಸಾಗಬೇಕಿದೆ. ಬಸವಣ್ಣ, ಬುದ್ಧ, ಏಸು ಕ್ರಿಸ್ತ, ಮಹಾವೀರರನ್ನು ದೇವರಂದು ಪೂಜಿಸಿ ಸ್ಥಾವರಕ್ಕೆ ಸೀಮಿತಗೊಳಿಸಬಾರದು. ಅವರ ಚಿಂತನೆಗಳು ಸಮಾಜಕ್ಕೆ ತಲುಪಿ ಪರಿವರ್ತನೆಗೆ ಪ್ರಯತ್ನಿಸಬೇಕೆಂದು ಹೇಳಿದರು. ಆಯಾ ಕಾಲಘಟ್ಟದ ಕ್ರೌರ್ಯಗಳನ್ನು ತಡೆಗಟ್ಟಲು ರೂಪಗೊಂಡ ಹೋರಾಟಗಳೆ ಭಕ್ತಿ ಚಳವಳಿಗಳಾಗಿವೆ ಎಂದು ಹೇಳಿದರು. ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ಪುರೋಹಿತಶಾಹಿ, ಜಡತ್ವದಿಂದ ಮುಕ್ತಗೊಳಿಸುವುದು ಭಕ್ತಿ ಚಳವಳಿಯಾಗಿತ್ತು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಶರಣಾಗುವುದು ಭಕ್ತಿ ಚಳವಳಿಯ ಗುರಿಯಾಗಿರಲಿಲ್ಲ ಬದಲಾಗಿ ಕ್ರಾಂತಿಯನ್ನು ನಿರ್ಮಿಸುವುದು ಭಕ್ತಿ ಚಳವಳಿಯ ಮೂಲವಾಗಿತ್ತು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಲೇಖಕ ಡಾ. ಸೀ.ಚ. ಯತೀಶ್ವರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಸವರಾಜ ಸಾದರ, ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಉಪಸ್ಥಿತರಿದ್ದರು.
‘ಬಸವಣ್ಣರನ್ನು ಕೇವಲ ಮಾತಿಗಷ್ಟೇ ಸೀಮಿತ ಮಾಡಿದ್ದೇವೆ. ಆದರೆ, ನಾವೆಲ್ಲ ಅವರನ್ನು ನಡೆಯುವ ದಾರಿಯಲ್ಲಿ ಕಾಣಬೇಕು. ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕರನ್ನು ಕರೆದು ಸನ್ಮಾನ ಮಾಡಬೇಕು. ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಮಹಾತ್ಮರನ್ನು ಮಾದರಿಯಾಗಿಸಿಕೊಂಡು, ಅವರ ಹಾದಿಯಲ್ಲಿ ನಡೆಯಬೇಕು’
-ಶಿವರುದ್ರ ಸ್ವಾಮೀಜಿ, ಬೇಲಿ ಮಠ







