ಫಿಲಿಪ್ಪೀನ್ಸ್: ಚಂಡಮಾರುತಕ್ಕೆ ಕನಿಷ್ಠ 230 ಬಲಿ
ವಿಯೆಟ್ನಾಂನತ್ತ ಧಾವಿಸುತ್ತಿರುವ ‘ಟೆಂಬಿನ್’

ಹನೋಯ್/ಮನಿಲಾ, ಡಿ. 25: ಫಿಲಿಪ್ಪೀನ್ಸ್‌ನಲ್ಲಿ ಸಾವು-ನಷ್ಟಗಳ ಸರಮಾಲೆಯನ್ನೇ ಉಂಟು ಮಾಡಿದ ಚಂಡಮಾರುತ ‘ಟೆಂಬಿನ್’ ಸೋಮವಾರ ವಿಯೆಟ್ನಾಂನತ್ತ ಧಾವಿಸುತ್ತಿದ್ದು, ದೇಶದ ದಕ್ಷಿಣ ಕರಾವಳಿಯಲ್ಲಿರುವ ಲಕ್ಷಾಂತರ ಜನರನ್ನು ಅಧಿಕಾರಿಗಳು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುತ್ತಿದ್ದಾರೆ.
ಚಂಡಮಾರುತದ ಪರಿಣಾಮವಾಗಿ ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಈಗಾಗಲೇ 230ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಚಂಡಮಾರುತವು ಸೋಮವಾರ ತಡರಾತ್ರಿ ವಿಯೆಟ್ನಾಮ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ.
ಕರಾವಳಿಯ ತಗ್ಗು ಪ್ರದೇಶಗಳಿಂದ ಈಗಾಗಲೇ 74,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ವಿಯೆಟ್ನಾಂನ ವಿಪತ್ತು ತಡೆ ಸಮಿತಿ ತಿಳಿಸಿದೆ. ಅದೇ ವೇಳೆ, ಇನ್ನೂ 10 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು 15 ರಾಜ್ಯಗಳ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ತೈಲ ಬಾವಿಗಳು ಮತ್ತು ಹಡಗುಗಳನ್ನು ರಕ್ಷಿಸಬೇಕು ಎಂದು ವಿಯೆಟ್ನಾಂ ಸರಕಾರ ಆದೇಶಿಸಿದೆ ಹಾಗೂ 62,000 ಮೀನುಗಾರಿಕಾ ದೋಣಿಗಳು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಸಾವಿರಾರು ಮಂದಿಗೆ ಶಿಬಿರಗಳಲ್ಲೇ ಕ್ರಿಸ್ಮಸ್
ಪ್ರಬಲ ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಫಿಲಿಪ್ಪೀನ್ಸ್‌ನ ಸಾವಿರಾರು ಗ್ರಾಮಸ್ಥರು ಸೋಮವಾರ ಕ್ರಿಸ್ಮಸ್ ದಿನವನ್ನು ತುರ್ತು ಶಿಬಿರಗಳಲ್ಲಿ ಕಳೆದರು.
ಲನಾವೊ ಡೆಲ್ ನೋರ್ಟ್ ಮತ್ತು ಲನಾವೊ ಡೆಲ್ ಸುರ್ ರಾಜ್ಯಗಳು ಮತ್ತು ಝಂಬೋಂಗ ಪರ್ಯಾಯ ದ್ವೀಪದಲ್ಲಿ ಚಂಡಮಾರುತದ ಪ್ರಕೋಪ ಭೀಕರವಾಗಿದ್ದು, ಈ ವಲಯಗಳಲ್ಲಿ ಅತಿ ಹೆಚ್ಚಿನ ಸಾವು-ನೋವುಗಳು ಸಂಭವಿಸಿವೆ.







