ಶಾತವಾಹನ ವಿವಿ: ದಲಿತ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಬಿಜೆಪಿ, ಎಬಿವಿಪಿ ಕಾರ್ಯಕರ್ತರು; ಆರೋಪ

ತೆಲಂಗಾಣ, ಡಿ,25: ಮನುಸ್ಮೃತಿಯ ಪ್ರತಿಗಳನ್ನು ಕೆಲವು ವಿದ್ಯಾರ್ಥಿಗಳು ದಹಿಸಲು ಯತ್ನಿಸಿದ ನಂತರ ತೆಲಂಗಾಣದ ಶಾತವಾಹನ ವಿವಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎಂದು scroll.in ವರದಿ ಮಾಡಿದೆ.
ಬಿಜೆಪಿ ಹಾಗು ಅದರ ಎಬಿವಿಪಿಯ 8 ಮಂದಿಯ ತಂಡ ದಲಿತ ವಿದ್ಯಾರ್ಥಿಗಳಿಗೆ ಕಲ್ಲು ಹಾಗು ದೊಣ್ಣೆಗಳಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಆಕ್ರಮಣಕಾರರು ಹೊರಗಿನವರು ಎಂದು ದಲಿತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ ಆಕ್ರಮಣ ನಡೆಸಿದವರು ವಿದ್ಯಾರ್ಥಿಗಳು ಎಂದು ಪೊಲೀಸರು ಹೇಳಿದ್ದಾರೆ. ಎರಡೂ ಕಡೆಗಳಿಂದ 22 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
“ಜಾತೀವಾದಿ ಪುಸ್ತಕವನ್ನು ನಾವು ಸುಟ್ಟು ಹಾಕಲು ನಿರ್ಧರಿಸಿದ್ದೆವು. ಬೆಳಗ್ಗೆ ಸುಮಾರು 10:30ಕ್ಕೆ ಈ ಘಟನೆ ನಡೆದಿದೆ. ಆಕ್ರಮಣ ನಡೆಸಿದವರು ಯಾರೆಂದು ನಮಗೆ ಗೊತ್ತಿಲ್ಲ. ನಮ್ಮ ಕ್ಯಾಂಪಸ್ ನೊಳಗೆ ನುಗ್ಗಿದ ಅವರು ಏಕಾಏಕಿ ದಾಳಿ ನಡೆಸಿದರು” ಎಂದು ಪ್ರೋಗ್ರೆಸಿವ್ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಯುನಿಯನ್ ನ ಜುಪಕ್ಕಾ ಶ್ರೀನಿವಾಸ್ ಹೇಳಿದ್ದಾರೆ.
ಇಂತಹ ಘಟನೆ ಇದೇ ಮೊದಲ ಬಾರಿ ನಡೆದಿದೆ. ಮನುಸ್ಮೃತಿಯನ್ನು ಸುಡುವುದಕ್ಕೆ ಈ ಹಿಂದೆ ಎಬಿವಿಪಿ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದವರು ಹೇಳಿದರು.
ಇನ್ನೊಂದು ಗುಂಪು ಭಾರತದ, ಹಿಂದುತ್ವದ ಹಾಗು ಆರೆಸ್ಸೆಸ್ ನ ವಿರುದ್ಧ ಘೋಷಣೆಗಳನ್ನು ಕೂಗಿತ್ತು ಎಂದು ಸ್ಥಳೀಯ ಬಿಜೆಪಿ ವಕ್ತಾರ ಬಂಡಿ ಸಂಜಯ್ ಎಂಬವರು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಮೊದಲು ದಲಿತ ಗುಂಪುಗಳು ಹಲ್ಲೆ ನಡೆಸಿತ್ತು. ಆದರೆ ಪೊಲೀಸರು ಬಿಜೆಪಿ ಕಾರ್ಯಕರ್ತರು ಆಕ್ರಮಣ ನಡೆಸಿರುವುದನ್ನು ಮಾತ್ರ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಾಳಿ ನಡೆಸಿದವರು ವಿದ್ಯಾರ್ಥಿಗಳು. ಅವರು ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬ ಆಚರಿಸುತ್ತಿದ್ದರು. ಈ ಸಂದರ್ಭ ಮನುಸ್ಮೃತಿಯ ಪ್ರತಿಗಳನ್ನು ದಲಿತ ವಿದ್ಯಾರ್ಥಿಗಳು ಸುಟ್ಟು ಹಾಕಲು ಪ್ರಯತ್ನಿಸಿರುವುದನ್ನು ಇವರು ನೋಡಿದ್ದಾರೆ. ಮಾತಿನ ಚಕಮಕಿ ನಡೆದು ನಂತರ ಮಾರಾಮಾರಿ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.







