ಸ್ವಘೋಷಿತ ದೇವಮಾನವನಿಂದ ಮಗಳನ್ನು ರಕ್ಷಿಸಿ : ರಾಜಸ್ತಾನದ ರೈತನ ಮನವಿ

ವೀರೇಂದರ್ ದೇವ್ ದೀಕ್ಷಿತ್
ಜೈಪುರ, ಡಿ.25: ದಿಲ್ಲಿಯಲ್ಲಿರುವ ಸ್ವಘೋಷಿತ ದೇವಮಾನವ ವೀರೇಂದರ್ ದೇವ್ ದೀಕ್ಷಿತ್ ಮಾಲಕತ್ವದ ಆಶ್ರಮದಲ್ಲಿ ಕೂಡಿ ಹಾಕಲಾಗಿರುವ ತನ್ನ ಪುತ್ರಿಯನ್ನು ರಕ್ಷಿಸುವಂತೆ ರಾಜಸ್ತಾನದ ರೈತನೋರ್ವ ಪೊಲೀಸರಿಗೆ ಮನವಿ ಮಾಡಿದ್ದಾನೆ.
2017ರ ನವೆಂಬರ್ 9ರಂದು ಮನೆಯಿಂದ ತನ್ನ ಮಗಳು ಟಿಕಾ ಕಾಣೆಯಾಗಿದ್ದಳು. ಆನಂದ್ ಎಂಬಾತ ದೀಕ್ಷಿತ್ನ ದಲ್ಲಾಳಿಯಂತೆ ಕಾರ್ಯನಿರ್ವಹಿಸುತ್ತಿದ್ದು ತನ್ನ ಮಗಳನ್ನು ಅಪಹರಿಸಿ ದಿಲ್ಲಿಯ ವಿಜಯವಿಹಾರದಲ್ಲಿರುವ ಆಶ್ರಮಕ್ಕೆ ರವಾನಿಸಿದ್ದಾನೆ ಎಂದು ಬಾಲಕಿಯ ತಂದೆ ನೀಡಿದ ದೂರಿನಂತೆ ರಾಜಸ್ತಾನ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಆದರೆ ಎಫ್ಐಆರ್ ಆಧಾರದಲ್ಲಿ ಸರ್ಚ್ ವಾರಂಟ್ನೊಂದಿಗೆ ದಿಲ್ಲಿಗೆ ಬಂದ ರಾಜಸ್ತಾನದ ಪೊಲೀಸರನ್ನು ದಿಲ್ಲಿಯ ಪೊಲೀಸರು ತಡೆದಿದ್ದು, ರಾಜಸ್ತಾನದ ವಾರಂಟ್ ದಿಲ್ಲಿಯಲ್ಲಿ ಅನ್ವಯಿಸುವುದಿಲ್ಲ ಎಂದಿದ್ದಾರೆ. ನಿರ್ವಾಹವಿಲ್ಲದೆ ರಾಜಸ್ತಾನ ಪೊಲೀಸರು ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಟ್ಟುಬಿಡದ ಬಾಲಕಿಯ ತಂದೆ ಮತ್ತೆ ಪೊಲೀಸರ ಮೊರೆ ಹೋದ ಬಳಿಕ ರಾಜಸ್ತಾನ ಪೊಲೀಸರು ಎರಡನೇ ಬಾರಿ ವಾರಂಟ್ ಜಾರಿಗೊಳಿಸಿದ್ದು ಈ ಬಾರಿಯ ವಾರಾಂಟ್ನಲ್ಲಿ ಬಾಲಕಿಯನ್ನು ಪತ್ತೆಹಚ್ಚಿ ತನ್ನೆದುರು ಹಾಜರುಪಡಿಸಬೇಕೆಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್(ಎಸ್ಡಿಎಂ) ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿತ್ತು. ಆದರೆ ಆಶ್ರಮದಿಂದ ಬಾಲಕಿಯನ್ನು ಹೊರತರಲು ಪೊಲೀಸರು ವಿಫಲರಾಗಿದ್ದರು.
ರಾಜಸ್ತಾನ ಮತ್ತು ದಿಲ್ಲಿ ಪೊಲೀಸರ ತಂಡ ಆಶ್ರಮಕ್ಕೆ ತೆರಳಿದಾಗ ಅವರನ್ನು ಎರಡು ಗಂಟೆ ಹೊರಗಡೆ ಕಾಯಿಸಿದ ಬಳಿಕ ಒಳಪ್ರವೇಶಿಸಲು ಅನುವು ಮಾಡಿಕೊಡಲಾಗಿದೆ. ಆದರೆ ತನ್ನ ಮಗಳನ್ನು ಆಶ್ರಮದಲ್ಲಿ ಸಮ್ಮೋಹನ(ಹಿಪ್ನೊಟೈಸ್)ಗೊಳಿಸಿರುವ ಕಾರಣ ಆಕೆ ಆಶ್ರಮ ಬಿಟ್ಟು ಬರಲು ನಿರಾಕರಿಸಿದ್ದು ನಿರ್ವಾಹವಿಲ್ಲದೆ ಪೊಲೀಸರ ತಂಡ ವಾಪಸಾಗಿದೆ ಎಂದು ಬಾಲಕಿಯ ತಂದೆ ತಿಳಿಸಿದ್ದು, ತನ್ನ ಮಗಳನ್ನು ದೀಕ್ಷಿತ್ನ ಕಪಿಮುಷ್ಟಿಯಿಂದ ಹೇಗಾದರೂ ಪಾರು ಮಾಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾನೆ.







