ಕೃಷಿ ಮಾರುಕಟ್ಟೆ ಇಲ್ಲದೆ ರೈತರಿಗೆ ನಷ್ಟ: ಹೊನ್ನೂರು ಬಸವಣ್ಣ

ಹನೂರು, ಡಿ.25: ರೈತರು ಸಾಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದ ರೆ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಹನೂರು ಭಾಗದಲ್ಲಿ ಕೃಷಿ ಮಾರುಕಟ್ಟೆ ಇಲ್ಲ. ಇದರ ಪ್ರಯೋಜನವನ್ನು ಪಡೆದ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊನ್ನೂರು ಬಸವಣ್ಣ ಹೇಳಿದ್ದಾರೆ.
ಸಮೀಪದ ಕೌದಳ್ಳಿ ಗ್ರಾಮದಲ್ಲಿ ಹಸಿರು ಸೇನಾ ಹಾಗೂ ರೈತರ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ರೈತರಿಗೆ ಸರಕಾರದಿಂದ ಸಮರ್ಪಕವಾಗಿ ಸವಲತ್ತುಗಳು ದೊರೆಯುತ್ತಿಲ್ಲ. ಇದರಿಂದ ರೈತರು ಸಾಲ ಮಾಡಿ ಕಷ್ಟದ ನಡುವೆಯು ಕೃಷಿಯನ್ನು ಮಾಡುತ್ತಾ ಬರುತ್ತಿದ್ದಾರೆ. ಆದರೆ ಸರಕಾರ ಮಾತ್ರ ರೈತರ ಶ್ರೇಯೋಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ. ಇದಕ್ಕೆ ಹನೂರು ಭಾಗದ ರೈತರು ಹೊರತೇನಲ್ಲ. ಇಲ್ಲಿನ ರೈತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದು, ಕಿರುಕುಳ ನೀಡುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಹೆಚ್ಚು ರೈತ ಸಂಘಗಳು ಉದಯವಾಗುವ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಈ ಮೂಲಕ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಹಸಿರು ಸೇನೆ ಹಾಗೂ ರೈತ ಸಂಘದ ಹನೂರು ಘಟಕಾಧ್ಯಕ್ಷ ಚಂಗಡಿ ಕರಿಯಪ್ಪ, ಸಂಘದ ಚಾ.ನಗರ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ರೈತ ಮುಖಂಡರಾದ ಮಸಣನಾಯಕ, ಸೀಗನಾಯಕ, ಕುಮಾರ್, ಲಿಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.





