ಉದಾಸೀನ ಬಿಟ್ಟು ಮೂಲ ಸಂಸ್ಕೃತಿ ಉಳಿಸಿ: ಚೆಕ್ಕೇರ ಸೋಮಯ್ಯ
ಯುಕೊ ಕೊಡವ ಮಂದ್ ನಮ್ಮೆ

ಮಡಿಕೇರಿ, ಡಿ.25: ಕೊಡವ ಸಂಸ್ಕೃತಿಯ ಬೇರು ಮಂದ್‌ಗಳಲ್ಲಿ ಅಡಗಿದೆ. ಕೊಡವ ಪದ್ಧತಿಯ ಆಚರಣೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಆಚರಣೆಯತ್ತ ಉದಾಸೀನ ಸರಿಯಲ್ಲ. ನಮ್ಮ ಹಿರಿಯರು ಅತ್ಯಂತ ಶ್ರದ್ಧಾಪೂರ್ವಕವಾಗಿ ರೂಪಿಸಿರುವ ಪದ್ಧತಿ ಪರಂಪರೆಯನ್ನು ಆಚರಣೆಯ ಮೂಲಕ ರಚಿಸಬೇಕಾಗಿದೆ ಎಂದು ಗೋಣಿಕೊಪ್ಪಕೊಡವ ಸಮಾಜದ ಅಧ್ಯಕ್ಷ ಚೆಕ್ಕೇರ ಸೋಮಯ್ಯ ಹೇಳಿದ್ದಾರೆ.
ಯುನೈಟೆಡ್ ಕೊಡವ ಅರ್ಗನೈಸೇಷನ್ (ಯುಕೊ) ವತಿಯಿಂದ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ನಡೆದ ನಾಲ್ಕನೇ ವರ್ಷದ ಕೊಡವ ಮಂದ್ ನಮ್ಮೆಗೆ ಕಾವೇರಿ ಮಾತೆಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚೆಕ್ಕೇರ ಸೋಮಯ್ಯ ಗೋಣಿಕೊಪ್ಪ ಕೊಡವ ಸಮಾಜದ ಜಾಗದಲ್ಲಿ ಹೊಸ ಮಂದ್ ಸ್ಥಾಪಿಸಲು ಯುಕೊ ಸಂಚಾಲಕ ಮಂಜು ಚಿಣ್ಣಪ್ಪನೀಡಿದ ಸಲಹೆಯಂತೆ ಅರಳಿ ಗಿಡ ನೆಟ್ಟು ಮಂದ್ ಸ್ಥಾಪಿಸಲಾಗಿದೆ. ಯುಕೊ ಮಂದ್ ನಮ್ಮೆ ಯಶಸ್ಸು ಹಾಗೂ ಕೀರ್ತಿ ಯುಕೊ ಸಂಘಟನೆಗೆ ಸಲ್ಲಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಡಾ. ಕಾಳಿಮಾಡ ಶಿವಪ್ಪಮಾತನಾಡಿ, ಮಂದ್‌ಗಳಲ್ಲಿಯೇ ಕೊಡವ ಸಂಸ್ಕೃತಿ ಉಳಿದಿದೆ ಹಾಗೂ ಮಂದ್‌ಗಳಿಂದಲೇ ಕೊಡವ ಸಂಸ್ಕೃತಿ ಮುಂದಿನ ಪೀಳಿಗೆಗೆ ಹರಡಿದೆ ಎಂಬ ಸತ್ಯವನ್ನು ಅರಿತು ಮಂದ್‌ಗಳನ್ನು ಪುನಃಶ್ಚೇತನಗೊಳಿಸಲು ಯುಕೊ ಸಂಘಟನೆಯ ಇಚ್ಛಾಶಕ್ತಿ ಪ್ರಶಂಸನಿಯ ಎಂದರು. ಅಧ್ಯಕ್ಷತೆ ವಹಿಸಿಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪಮಾತನಾಡಿದರು.
ವೇದಿಕೆಯಲ್ಲಿ ನೆಲ್ಲಮಕ್ಕ ಧರಣು, ತೀತರಮಾಡ ಬೋಸು, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಮಾದಯ್ಯ, ಅಣ್ಣೀರ ಹರೀಶ್ ಮಾದಪ್ಪಉಪಸ್ಥಿತರಿದ್ದರು.ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ನಿರೂಪಿಸಿದರು. ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ವಂದಿಸಿದರು. ನಮ್ಮೆ ಸಂಬಂಧ ಆಯೋಜಿಸಿದ್ದ ವಿವಿಧ ಸ್ಪರ್ಧೆ ಕಾರ್ಯಕ್ರಮಗಳು ಗಮನ ಸೆಳೆದವು.







