ಅನಂತಕುಮಾರ ಹೆಗಡೆ ವಿರುದ್ಧ ಸಮಾನ ಮನಸ್ಕರ ಪ್ರತಿಭಟನೆ

ಚಿಕ್ಕಮಗಳೂರು, ಡಿ.25: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಿರುದ್ಧ ಚಿಕ್ಕಮಗಳೂರು ನಗರ ಆಝಾದ್ ಪಾರ್ಕ್‌ನಲ್ಲಿ ಸಮಾನ ಮನಸ್ಕ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೋಮವಾರ ಧರಣಿ ನಡೆಸಿದ್ದಾರೆ.
ಸಚಿವರಾಗಿ ಅನಂತಕುಮಾರ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಭಾರತದ ಸಂವಿಧಾನದ ಅಡಿಯಲ್ಲಿ ಚುನಾವಣೆ ಎದುರಿಸಿ ಗೆದ್ದು, ಇದೀಗ ಅದೇ ಸಂವಿಧಾನವನ್ನು ಬದಲಿಸಲು ನಾವು ಬಂದಿದ್ದೇವೆ ಎಂದಿರುವುದು ಅವರ ವ್ಯಘ್ರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಅಲ್ಲದೇ ಜಾತ್ಯತೀತರ ರಕ್ತ ಯಾವುದೆಂದು ಅವರಿಗೆ ಗೊತ್ತಿರುವಂತಿಲ್ಲ ಎಂದು ಜಾತ್ಯತೀತ ಶಕ್ತಿಯನ್ನು ಕೆಣಕಿದ್ದಾರೆ. ಅವರನ್ನು ತಕ್ಷಣ ಕೇಂದ್ರ ಸಚಿವ ಸಂಪುಟದಿಂದ ಕೆಳಗಿಳಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಈ ವೇಳೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ರಾಜ್ಯ ರೈತ ಸಂಘದ ಮುಖಂಡ ಗುರುಶಾಂತಪ್ಪ, ಜನಧ್ವನಿ ಸಂಘಟನೆಯ ಅಮ್ಜದ್, ಬಿಎಸ್ಪಿಯ ಕೆ.ಟಿ.ರಾಧಾಕೃಷ್ಣ ಮತ್ತಿತರರು ನೇತೃತ್ವ ವಹಿಸಿದ್ದರು.







