ಬರಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪಣ: ಸಿಎಂ ಸಿದ್ದರಾಮಯ್ಯ
ಗದಗದಲ್ಲಿ ಅಭಿವೃದ್ಧಿ ಪರ್ವದ ಸಾಧನಾ ಸಂಭ್ರಮ

► ನದಿ ನೀರಿನಿಂದ ಕೆರೆ ತುಂಬಿಸುವ ಯೋಜನೆಗಳಿಗೆ ಆದ್ಯತೆ
► ಯೋಜನೆಗೆ 7ಸಾವಿರ ಕೋಟಿ ರೂ. ಅನುದಾನ
► ಸರಕಾರದ ಸಾಧನೆಯ ಸತ್ಯ ಹೇಳಲು ಪ್ರವಾಸ
ಗದಗ ಡಿ. 25: ಕರ್ನಾಟಕ ರಾಜ್ಯವನ್ನು ಬರಮುಕ್ತ ರಾಜ್ಯವನ್ನಾಗಿ ನಿರ್ಮಿಸಲು ನದಿಗಳ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ನಮ್ಮ ಸರಕಾರ ಆದ್ಯತೆ ನೀಡುತ್ತಿದೆ. ಈ ಯೋಜನೆಗಳಿಗೆಂದೇ 7 ಸಾವಿರ ಕೋಟಿ ರೂ. ಅನುದಾನ ವೆಚ್ಚ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಂ.ಎ. ಕಾಲೇಜು ಮೈದಾನದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಹಾಗೂ ಅಭಿವೃದ್ಧಿ ಪರ್ವದ ಸಾಧನಾ ಸಂಭ್ರಮ ಪುಸ್ತಕಗಳ ಬಿಡುಗಡೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಕಳೆದ 16 ವರ್ಷಗಳ ಪೈಕಿ 13 ವರ್ಷಗಳು ಬರಕ್ಕೆ ತುತ್ತಾಗಿದೆ. ದೇಶದಲ್ಲಿ ರಾಜಸ್ಥಾನ ಬಿಟ್ಟರೆ, ಮಳೆ ಆಶ್ರಿತ ಕೃಷಿ ಒಣಭೂಮಿ ಹೆಚ್ಚು ಇರುವುದು ಕರ್ನಾಟಕದಲ್ಲಿಯೇ. ರಾಜ್ಯದ ಕೋಲಾರ ಮೊದಲಾದ ಜಿಲ್ಲೆಗಳಲ್ಲಿ ಅಂತರ್ಜಲ ಸುಮಾರು ಒಂದು ಸಾವಿರದಿಂದ 1,600 ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಇದರ ಗಂಭೀರತೆಯನ್ನು ಅರಿತಿರುವ ರಾಜ್ಯ ಸರಕಾರ ರಾಜ್ಯವನ್ನು ಬರಮುಕ್ತವನ್ನಾಗಿಸಲು ನದಿ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ಈಗಾಗಲೇ ಗದಗ ಜಿಲ್ಲೆಯಲ್ಲಿ ಬಹಳಷ್ಟು ಕೆರೆಗಳನ್ನು ತುಂಬಿಸಲಾಗಿದೆ. ಇದೀಗ 140 ಕೋಟಿ ರೂ. ವೆಚ್ಚದಲ್ಲಿ ಹೊಳೆ-ಇಟಗಿ ಏತನೀರಾವರಿ ಯೋಜನೆ ಮೂಲಕ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ 20 ಕೆರೆಗಳು ಹಾಗೂ 80ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಎಂದರು.
ನೀರಾವರಿ ಯೋಜನೆಗಳಿಗೆ ಹೆಚ್ಚು ಅನುದಾನ: ನಮ್ಮ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ವರ್ಷಕ್ಕೆ 10 ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈಗಾಗಲೇ 45 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಮಾರ್ಚ್ ಒಳಗಾಗಿ ಒಟ್ಟು 50 ಸಾವಿರ ಕೋಟಿ ರೂ. ಗೂ ಹೆಚ್ಚು ವೆಚ್ಚ ಮಾಡಿ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಿದ್ದೇವೆ ಎಂದರು.
ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್ ಹಾಗೂ ಗಣ್ಯರಾದ ಗಡ್ಡದ ದೇವರಮಠ ಮಾತನಾಡಿದರು. ಸಮಾರಂಭದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ, ರೋಣ ಹಾಗೂ ಮುಂಡರಗಿ ತಾಲೂಕುಗಳಲ್ಲಿ ಸರಕಾರದ ಸಾಧನೆಯ ವಿವರಗಳನ್ನು ಬಿಂಬಿಸುವ ಸಾಧನಾ ಸಂಭ್ರಮ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಲಕ್ಷ್ಮೇಶ್ವರ ನೂತನ ತಾಲೂಕಿನ ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು. ಅಲ್ಲದೆ, ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಮುಖ್ಯಮಂತ್ರಿ ವಿತರಿಸಿದರು. ವಾಯವ್ಯ ಸಾರಿಗೆ ಸಂಸ್ಥೆಯ ನೂತನ ಬಸ್‌ಗಳಿಗೆ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದರು.
ಸಮಾರಂಭದಲ್ಲಿ ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪಮಾನಪ್ಪಲಮಾಣಿ, ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ್, ರಾಜ್ಯದ ದಿಲ್ಲಿ ಪ್ರತಿನಿಧಿ ಸಲೀಂ ಅಹ್ಮದ್, ಜಿಪಂ ಅಧ್ಯಕ್ಷ ವಾಸಪ್ಪಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ಮಾಜಿ ಶಾಸಕಾರ ಡಿ.ಆರ್. ಪಾಟೀಲ, ಹಿಂಡಸಗೇರಿ, ನಂಜಯ್ಯನಮಠ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷಬಾಬು, ಉಪಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಉಪಸ್ಥಿತರಿದ್ದರು. ಜಿಪಂ ಸಿಇಒ ಮಂಜುನಾಥ ಚವ್ಹಾಣ ಸ್ವಾಗತಿಸಿದರು.
ಕೇಂದ್ರ ಸರಕಾರ ಸಾಲಮನ್ನಾ ಮಾಡಿಲ್ಲ: ಸಿಎಂ
ರಾಜ್ಯದಲ್ಲಿ ಎರಡು ವರ್ಷಗಳ ಕಾಲ ಭೀಕರ ಬರ ಪರಿಸ್ಥಿತಿ ತಲೆದೋರಿ, ರೈತರು ಆತಂಕದಲ್ಲಿದ್ದರು. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 42 ಸಾವಿರ ಕೋಟಿ ರೂ. ಸಾಲ ಮಾಡಿದ್ದು, ಸಹಕಾರಿ ಬ್ಯಾಂಕ್‌ಗಳಲ್ಲಿ 10,730 ಕೋಟಿ ರೂ. ಸಾಲ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ರಾಜ್ಯದ ರೈತರ ಹಿತಕಾಯಲು ನಮ್ಮ ಸರಕಾರ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿ, ಕೊಟ್ಟ ಭರವಸೆಯನ್ನು ಉಳಿಸಿಕೊಂಡೆವು. ಕೇಂದ್ರ ಸರಕಾರ ಮಾತ್ರ ಇದುವರೆಗೂ ಸಾಲ ಮನ್ನಾಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ತುಂಗಭದ್ರಾ ಮತ್ತು ಮಲಪ್ರಭ ನದಿಯ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಕೈಗೊಂಡಿದೆ. ಬರುವ ಜನವರಿ ತಿಂಗಳ ಕೊನೆಯ ವಾರದಲ್ಲಿ ಇದನ್ನು ಲೋಕಾರ್ಪಣೆಗೊಳಿಸಿ, ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಒಳ್ಳೆಯ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು.
ಸಿದ್ದರಾಮಯ್ಯ, ಸಿಎಂ







