ಚಿತ್ರಕಲಾ ಪರಿಷತ್‌ನಿಂದ ಸಂಜೆಕಾಲೇಜು ಆರಂಭ: ಬಿ.ಎಲ್. ಶಂಕರ್

► ಜ.15ರಿಂದ ಬೆಂಗಳೂರಿನಲ್ಲಿ ಚಿತ್ರಸಂತೆ
► ಕಲಾವಿದರಿಂದ ಪ್ರವೇಶಾವಕಾಶಕ್ಕೆ ಅರ್ಜಿ
► ಬೆಂಗಳೂರಿನಲ್ಲಿ ಭವ್ಯ ಕಾಲೇಜು ನಿರ್ಮಾಣ
ಚಿಕ್ಕಮಗಳೂರು, ಡಿ.25: ಕರ್ನಾಟಕ ಚಿತ್ರಕಲಾ ಪರಿಷತ್ ಮುಂದಿನ ಶೈಕ್ಷಣಿಕ ವರ್ಷದಿಂದ ಸಂಜೆಕಾಲೇಜು ಆರಂಭಿಸಲಿದೆ ಎಂದು ಚಿತ್ರಕಲಾ ಪರಿಷತ್‌ನ ರಾಜ್ಯಾಧ್ಯಕ್ಷ ಬಿ.ಎಲ್. ಶಂಕರ್ ಹೇಳಿದ್ದಾರೆ. ಅವರು ಕುವೆಂಪು ಕಲಾಮಂದಿರದಲ್ಲಿ ಕ್ಯಾತನಬೀಡು ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಿತ್ರಪಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಸಂಜೆ 5ರಿಂದ ರಾತ್ರಿ 9ರವರೆಗೆ ಸಂಜೆ ಕಾಲೇಜು ಚಿತ್ರಕಲೆ ಕುರಿತು ತರಗತಿಗಳು ನಡೆಯಲಿವೆ. ಭಾರತದ ಯಾವುದೇ ರಾಜ್ಯಗಳಲ್ಲಿ ಸಂಜೆ ಕಾಲೇಜು ನಡೆಯುತ್ತಿಲ್ಲ. ಸಂಜೆಕಾಲೇಜು ಆರಂಭಿಸಲು ಪಾಠ ಮಾಡುವವರಿಂದಲೇ ವಿರೋಧವಿತ್ತು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಬೆಂಗಳೂರಿನಲ್ಲಿ ಭವ್ಯ ಕಲಾ ಕಾಲೇಜು ನಿರ್ಮಿಸಲು ಉದ್ದೇಶಿಸಿರುವುದಾಗಿ ಹೇಳಿದರು. ಜ.15ರಿಂದ ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯಲಿದ್ದು, ಈ ಚಿತ್ರಸಂತೆಗೆ ಮೂರು ಸಾವಿರಕ್ಕೂ ಹೆಚ್ಚು ಕಲಾವಿದರು ಪ್ರವೇಶಾವಕಾಶಕ್ಕೆ ಅರ್ಜಿ ಹಾಕಿದ್ದಾರೆ. ಕೇವಲ ಶ್ರೀಮಂತರ ಸ್ವತ್ತು ಎಂದು ಹೇಳಲಾಗುತ್ತಿದ್ದ ಚಿತ್ರಸಂತೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ತಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಚಿತ್ರಕಲಾ ಸಂಜೆಕಾಲೇಜು ಆರಂಭಿಸಲು ಪಾಠ ಮಾಡುವವರಿಂದಲೇ ವಿರೋಧವಿತ್ತು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ.
ಬಿ.ಎಲ್. ಶಂಕರ್, ಚಿತ್ರಕಲಾ ಪರಿಷತ್‌ನ ರಾಜ್ಯಾಧ್ಯಕ್ಷ







