ಉನ್ನತ ಶಿಕ್ಷಣ ನೀಡುವುದು ಸರಕಾರದ ಆದ್ಯ ಕರ್ತವ್ಯ: ಡಾ. ಧನಸಿಂಗ್ ರಾವತ್

ಸಾಗರ, ಡಿ.25: ಸಮಾಜ ಸುಧಾರಣೆ ದೃಷ್ಟಿಯಿಂದ ಉನ್ನತ ಶಿಕ್ಷಣ ನೀಡುವುದು ಸರಕಾರದ ಆದ್ಯ ಕರ್ತವ್ಯ ಎಂದು ಉತ್ತರಾಖಂಡ್ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಧನಸಿಂಗ್ ಜಿ.ರಾವತ್ ಹೇಳಿದ್ದಾರೆ.
ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್.ಬಿ.ಕಾಲೇಜಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಉತ್ತರಾಖಂಡ್ ರಾಜ್ಯದ ಉನ್ನತ ಶಿಕ್ಷಣ ಸಚಿವನಾಗಿ ಕಳೆದ 7ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದೇನೆ. ನಮ್ಮ ರಾಜ್ಯದಲ್ಲಿ ನಾಯಕರು, ಗುತ್ತಿಗೆದಾರರು, ಪತ್ರಕರ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಐಎಎಸ್, ಐಎಫ್‌ಎಸ್ ಮಟ್ಟದ ಉನ್ನತ ಅಧಿಕಾರಿಗಳಾಗುವವರ ಸಂಖ್ಯೆ ಬಹಳ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಶೋಧ ನಡೆಸಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸುಪರ್ 30, ಸುಪರ್ 100 ಯೋಜನೆಯಡಿ ಡೆಹರಾಡೂನ್‌ನಲ್ಲಿ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದರು.
ಪದವಿ ತರಗತಿಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ. ಪದವಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯ ವಸ್ತ್ರ ಸಂಹಿತಿ ರೂಢಿಗೆ ತರಲಾಗಿದೆ. ಸಂಸ್ಕೃತ, ವೇದ ಮತ್ತು ಯೋಗ ವಿಷಯಗಳನ್ನು ಪದವಿ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತೆ ಕಡ್ಡಾಯಗೊಳಿಸಲಾಗಿದೆ. ಮುಂದಿನ 2020ರಲ್ಲಿ ಉತ್ತರಾಖಂಡ್ ಸಂಪೂರ್ಣ ಸಾಕ್ಷರತೆ ಸಾಧಿಸುವ ಮೂಲಕ ಕೇರಳದ ಸಮಾನ ರಾಜ್ಯವಾಗಿ ದಾಖಲೆ ಮಾಡಲಿದೆ ಎಂದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಎನ್.ಎಚ್.ಶ್ರೀಪಾದ್‌ರಾವ್, ಉತ್ತರಾಖಂಡ್ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಯೋಗರಾಜ್ ಖಂಡೂರಿ ಇತರರಿದ್ದರು. ಪ್ರಾಚಾರ್ಯ ಡಾ.ಜಗದೀಶ ಎಂ. ಭಂಡಾರಿ ಸ್ವಾಗತಿಸಿದರು. ಬಿ.ಜಿ.ಮಂಜಪ್ಪ ನಿರೂಪಿಸಿದರು. ಮುಖಂಡರಾದ ಸಿ.ಎಸ್.ಲಿಂಗರಾಜ, ಜಗದೀಶ ಗೌಡ, ಗಿರೀಶ್ ಕೋವಿ, ಎಚ್.ಎಸ್.ಮಂಜಪ್ಪ ಇದ್ದರು.







