ರಾಜಕಾರಣದಲ್ಲಿ ಸಂಸ್ಕಾರ ಮಾಯ: ಸಚಿವ ರಮೇಶ್ ಕುಮಾರ್
ಕೋಲಾರ: ಕೆಸಿಸಿ ಸಾಲ ವಿತರಣಾ ಕಾರ್ಯಕ್ರಮ

ಕೋಲಾರ, ಡಿ.25: ರಾಜಕಾರಣ ಎಂದರೆ ಶೋಕಿ ಎಂಬಂತಾಗಿದೆ. ಚುನಾವಣೆ ಬಳಿಕ ಯಾರೂ ಬೇಕಾಗಿಲ್ಲ. ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೂ ಸಂಸ್ಕಾರ ಮಾಯವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ವಿಷಾದಿಸಿದ್ದಾರೆ.
ಸೋಮವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ತಾಲೂಕಿನ ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಆವರಣದಲ್ಲಿ ರೈತರಿಗೆ ಶೂನ್ಯಬಡ್ಡಿ ಸಾಲದ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಚುನಾವಣೆ ಬಂದರೆ ಬಂಡವಾಳ ಹಾಕಬೇಕು ಎಂಬ ಭಾವನೆ ಬೆಳೆಯುವುದು ಪ್ರಜಾಪ್ರಭುತ್ವ ದೃಷ್ಟಿಯಿಂದ ಒಳ್ಳೆಯದಲ್ಲ. ಅಂತಹ ಹಣ ನೀಡುವ ಮಾಯಾಲೋಕದಲ್ಲಿ ಮತ ಕೇಳುವುದು ನನಗೆ ರೂಢಿಯಾಗಿಲ್ಲ ಎಂದರು.
ನಮಗೆ ರಾಜಕಾರಣಕ್ಕೆ ಬರಲು ಪ್ರೇರಣೆ ಹಣವಲ್ಲ. ನಮಗೆ ಹಿರಿಯರಾಗಿದ್ದವರು ಜನರ ಕೆಲಸ ಮಾಡುವುದು ಹೇಗೆ ಎಂಬ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಎಂದರು.
ರಾಜಕಾರಣ ಎಂದರೆ ಸೈಕ್ಲೋನ್‌ನಂತೆ ಯಾವಾಗದಾರೂ ಬಂದು ಜನರ ಬದುಕನ್ನು ನಾಶ ಮಾಡಬಹುದು ಎಂದು ವಿಷಾದಿಸಿದರು.
ದೇಶ ಕಾಯುವ ಯೋಧ ಗಡಿಯಲ್ಲಿ ಹಿಮಗಡ್ಡೆಗಳ ನಡುವೆ ಬಂದೂಕು ಹೆಗಲಿಗೇರಿಸಿ ಗಡಿ ಕಾಯುತ್ತಿದ್ದಾನೆ. ಅವನಿಗೆ ಇಲ್ಲಿನ ಯಾವ ಸ್ಥಿತಿಯ ಅರಿವು ಇರುವುದಿಲ್ಲ್ಲ, ಅವನು ಸತ್ತರೆ ಮೆರವಣಿಗೆ ಮಾಡಿ ಗೌರವ ನೀಡುತ್ತೇವೆ ಅಷ್ಟೆ. ಅದೇ ರೀತಿ ಅನ್ನ ನೀಡುವ ರೈತ ತನ್ನ ಮನೆಗೆ ಬೇಕಾದಷ್ಟು ಧಾನ್ಯ ಬೆಳೆದು ಸುಮ್ಮನಾದರೆ ನಗರಗಳಲ್ಲಿರುವವರ ಗತಿಯೇನು ಎಂದು ಪ್ರಶ್ನಿಸಿದರು.
ಕೋಲಾರ ಡಿಸಿಸಿ ಬ್ಯಾಂಕ್ ಈಗ ದುಡಿಯುವ ರೈತರು, ಮಹಿಳೆಯರ ನೆರವಿಗೆ ನಿಂತಿದೆ. ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಅವರ ಆಡಳಿತ ಮಂಡಳಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಬ್ಯಾಂಕ್ ಮತ್ತಷ್ಟು ಪ್ರವರ್ಧಮಾನಕ್ಕೆ ಬೆಳೆಯಬೇಕು ಎಂದು ಹಾರೈಸಿದರು.
ಕೃಷಿ ಸಚಿವ ಕೃಷ್ಣಬೈರೇಗೌಡ ನಮ್ಮಂತೆ ಜನರ ಮಧ್ಯೆಯಿಂದ ಹೋದವರು ದಿವಂಗತ ಬೈರೇಗೌಡರಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ರೈತರ ಹಿತ ಕಾಯಲು ಬ್ಯಾಂಕ್ ಬದ್ಧವಾಗಿದೆ. ರಾಜ್ಯ ಸರಕಾರದ 50 ಸಾವಿರ ರೂ. ಸಾಲ ಮನ್ನಾ ಯೋಜನೆಯ ಲಾಭವನ್ನು ಎಲ್ಲಾ ರೈತರಿಗೂ ತಲುಪಿಸಲಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಸಮಾಜದ ಕಟ್ಟಕಡೆಯ ವ್ಯಕ್ತಿ, ಕುಟುಂಬಕ್ಕೂ ಸಾಲ ಸೌಲಭ್ಯ ತಲುಪಿಸುವ ಶಕ್ತಿ ಪಡೆಯುವತ್ತ ಪ್ರಾಮಾಣಿಕ ಯತ್ನ ನಡೆಸಿದೆ. ಎರಡೂ ಜಿಲ್ಲೆಯ ಪ್ರತೀ ಕುಟುಂಬದ ವ್ಯಕ್ತಿಯೂ ಸಹಕಾರಿ ಸದಸ್ಯರಾಗಿ ಸೌಲಭ್ಯ ಪಡೆದಾಗ ಮಾತ್ರ ಸಾರ್ಥಕತೆ ಎಂದರು.
ಕೋಚಿಮುಲ್ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪಮಾತನಾಡಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಜಿಪಂ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಮುಖಂಡರಾದ ನೆನುಮನಹಳ್ಳಿ ಚಂದ್ರಶೇಖರ್, ಸೊಣ್ಣೇಗೌಡ, ಪ್ರಸಾದ್, ವಕೀಲ ಕುಡುವನಹಳ್ಳಿ ಮಂಜುನಾಥ್, ಗ್ರಾಪಂ ಸದಸ್ಯ ದೇವರಾಜ್, ಎಸ್‌ಎಫ್‌ಸಿಎಸ್ ಉಪಾಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್, ಆಲೇರಿ ಬಾಬು, ತುರಾಂಡಹಳ್ಳಿ ಸರ್ವೇಶ್ ಮತ್ತಿತರರು ಉಪಸ್ಥಿತರಿದ್ದರು. ಕಲಾವಿದ ಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







