ಚಿಕ್ಕಬಳ್ಳಾಪುರ: ಸಂಭ್ರಮದ ಕ್ರಿಸ್‌ಮಸ್

ಚಿಕ್ಕಬಳ್ಳಾಪುರ, ಡಿ.25: ನಗರದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದರು. ನಗರದ ಪ್ರಮುಖ ದೇವಾಲಯಗಳಾದ ಸಿಎಸ್‌ಐ ಕ್ರೈಸ್ಟ್ ಚರ್ಚ್, ಸೈಂಟ್ ಕ್ಸೇವಿಯರ್ ಚರ್ಚ್ ಸೇರಿದಂತೆ ಇತರ ಚರ್ಚ್‌ಗಳು ವಿಶೇಷವಾಗಿ ಅಲಂಕೃತಗೊಂಡಿದ್ದವು. ಬೆಳಗ್ಗೆಯಿಂದಲೇ ಚರ್ಚ್‌ಗಳಿಗೆ ಭೇಟಿ ನೀಡಿ ಕ್ರೈಸ್ತ ಬಾಂಧವರು, ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಕ್ರಿಸ್ತನ ಸಂದೇಶಗಳನ್ನು ಆಲಿಸಿದರು.
ಕ್ರಿಸ್‌ಮಸ್ ಆಚರಣೆಯ ಅಂಗವಾಗಿ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನಾ ಕೂಟಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗಿನಿಂದಲೇ ಆರಂಭವಾದ ಕ್ರಿಸ್‌ಮಸ್ ಆಚರಣೆಯಲ್ಲಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ ಕ್ರೈಸ್ತ ಬಾಂಧವರು, ಸ್ನೇಹಿತರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಉಡುಗೊರೆ, ಸಿಹಿ, ಬಗೆಬಗೆಯ ಆಹಾರ ಖಾದ್ಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ವಾತಾವರಣವನ್ನು ಮತ್ತಷ್ಟು ಸಂತಸದಿಂದ ಕಳೆದರು. ಜಾತಿ, ಮತ ಭೇದವಿಲ್ಲದೆ ಅನೇಕ ಜನರು ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಸಂಸದ ಎಂ.ವೀರಪ್ಪ ಮೊಯಿಲಿ, ಶಾಸಕ ಡಾ. ಕೆ.ಸುಧಾಕರ್, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಕೆ.ವಿ. ಮತ್ತು ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಜಿಪಂ ಸದಸ್ಯ ಕೆ.ಸಿ.ರಾಜಾಕಾಂತ್ ಸೇರಿದಂತೆ ಮತ್ತಿತರರು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು.
ಸಿಎಸ್‌ಐ ಚರ್ಚ್‌ನ ಹೆನ್ರಿ ಪ್ರಸನ್ನಕುಮಾರ್, ಎಸ್.ವಿನ್‌ಸ್ಟನ್‌ಕೆನಡಿ, ಕಿರಣ್ ವಿಕ್ಟರ್, ವೀಣಾದತ್, ಶಶಿಕಲಾ ಸೈಮನ್ ಮತ್ತಿತರರು ಉಪಸ್ಥಿತರಿದ್ದರು.







