ಈ ವರ್ಷ 37 ಪಂದ್ಯಗಳಲ್ಲಿ ಜಯ ಗಳಿಸಿದ ಭಾರತ

ಮುಂಬೈ , ಡಿ.25: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನಡೆದ ಟ್ವೆಂಟಿ-20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 5 ವಿಕೆಟ್‌ಗಳ ಜಯ ಗಳಿಸಿದೆ. ಇದರೊಂದಿಗೆ ಸರಣಿಯಲ್ಲಿ 3-0 ಗೆಲುವು ದಾಖಲಿಸಿ ಲಂಕಾ ವಿರುದ್ಧ ಮತ್ತೊಂದು ಸರಣಿಯನ್ನು ಭಾರತ ವೈಟ್‌ವಾಶ್ ಮಾಡಿದೆ. ಭಾರತ 2017ರಲ್ಲಿ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಸರಣಿಯಲ್ಲಿ 37 ಪಂದ್ಯಗಳಲ್ಲಿ ಜಯ ಗಳಿಸಿದೆ. ಒಂದೇ ವರ್ಷ ಗರಿಷ್ಠ ಪಂದ್ಯಗಳನ್ನು ಜಯಿಸಿದ ತಂಡಗಳಲ್ಲಿ ಭಾರತ ಎರಡನೇ ತಂಡ ಎಂಬ ದಾಖಲೆ ಬರೆದಿದೆ. ಆಸ್ಟ್ರೇಲಿಯ 2003ರಲ್ಲಿ 38 ಪಂದ್ಯಗಳನ್ನು ಜಯಿಸಿತ್ತು.
ಭಾರತ 2017ರಲ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ಪಂದ್ಯಗಳನ್ನು ಜಯಿಸಿದೆ. ಟೆಸ್ಟ್‌ನಲ್ಲಿ 2016ರಲ್ಲಿ ಭಾರತ 9 ಪಂದ್ಯಗಳಲ್ಲಿ ಜಯ ಗಳಿಸಿತ್ತು. ಒಂದು ಪಂದ್ಯದಲ್ಲೂ ಸೋತಿರಲಿಲ್ಲ. 1998ರಲ್ಲಿ 24 ಮತ್ತು 2013ರಲ್ಲಿ 22 ಪಂದ್ಯಗಳಲ್ಲಿ ಜಯ ಗಳಿಸಿತ್ತು.2016ರಲ್ಲಿ ಭಾರತ ಟ್ವೆಂಟಿ-20ಯಲ್ಲಿ 15 ಪಂದ್ಯಗಳಲ್ಲಿ ಜಯ ಗಳಿಸಿತ್ತು. 5 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.
ಮೂರನೇ ಟ್ವೆಂಟಿ-20 ಪಂದ್ಯದ ಹೈಲೈಟ್ಸ್
►ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಮೊದಲ ಬಾರಿ ಜಯ ಗಳಿಸಿದೆ.
►ಭಾರತ ಈ ವರೆಗೆ ಲಂಕಾ ವಿರುದ್ಧ 14 ಟ್ವೆಂಟಿ-20ಪಂದ್ಯಗಳಲ್ಲಿ ಆಡಿದೆ. 10ರಲ್ಲಿ ಜಯ ಗಳಿಸಿದೆ. ಸೋಲು 4 .
►ಫೆ.12, 2016ರಿಂದ ಡಿ.24, 2017ರ ತನಕ ಲಂಕಾ ವಿರುದ್ಧ ಭಾರತ ಸತತ 7 ಪಂದ್ಯಗಳಲ್ಲಿ ಜಯ ಗಳಿಸಿದೆ.
►ಶ್ರೀಲಂಕಾ 2017ರಲ್ಲಿ ಆಡಿರುವ 57 ಪಂದ್ಯಗಳಲ್ಲಿ 40ರಲ್ಲಿ ಸೋತಿದೆ.
►ರೋಹಿತ್ ಶರ್ಮಾ 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ 33 ಇನಿಂಗ್ಸ್‌ಗಳಲ್ಲಿ 65 ಸಿಕ್ಸರ್ ಸಿಡಿಸಿದ್ದಾರೆ. ಎಬಿಡಿ ವಿಲಿಯರ್ಸ್ 2015ರಲ್ಲಿ 34 ಇನಿಂಗ್ಸ್‌ಗಳಲ್ಲಿ 63 ಸಿಕ್ಸರ್ ಬಾರಿಸಿದ್ದರು.
►ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ರೋಹಿತ್ ಶರ್ಮಾ 13 ಸಿಕ್ಸರ್ ಬಾರಿಸಿದ್ದರು.
►ಜೈದೇವ್ ಉನದ್ಕಟ್ 15ಕ್ಕೆ 2 ವಿಕೆಟ್ ಪಡೆಯುವುದರೊಂದಿಗೆ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
►ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮೂರನೇ ಜಯ ಗಳಿಸಿದೆ.







