ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ: ಎಫ್‌ಕೆಸಿಸಿಐ ಅಧ್ಯಕ್ಷ ರವಿ ಹೇಳಿಕೆ
► ಜಪಾನೀ ಕಂಪೆನಿಗಳಿಂದ ಉದ್ಯೋಗಾವಕಾಶದ ಭರವಸೆ
► ಯುವಕರಿಗೆ ಈ ಕೇಂದ್ರದಿಂದ ನೆರವು
ಶಿವಮೊಗ್ಗ, ಡಿ.25: ಚೇಂಬರ್ ಆಫ್ ಕಾಮರ್ಸ್ ಒಕ್ಕೂಟಗಳ ರಾಜ್ಯ ಸಮಿತಿಯು ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸದ್ಯದಲ್ಲೇ ಆರಂಭಿಸಲಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಕೆ. ರವಿ ಹೇಳಿದ್ದಾರೆ.
ಸೋಮವಾರ ನಗರದ ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಸಂಘಟನೆಯ 54ನೇ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಸರಕಾರವು ಈ ಯೋಜನೆಗಾಗಿ ಬೆಂಗಳೂರಿನಿಂದ 45 ಕಿ.ಮೀ. ದೂರದಲ್ಲಿರುವ ದಾಬಸ್‌ಪೇಟೆಯಲ್ಲಿ 1.6 ಎಕರೆ ಜಮೀನು ನೀಡಿದೆ. ಇದರಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯದಿಂದ ತರಬೇತಿ ಕೇಂದ್ರವನ್ನು ಆಂಭಿಸಲಾಗುವುದು. ಹೊಸ ಸಂಶೋಧನೆಗಳನ್ನು ಮಾಡುವುದು ಇಂದಿನ ಅಗತ್ಯವಾಗಿದೆ. ಮಾಹಿತಿ ತಂತ್ರಜ್ಞಾನ ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ ಯುವಕರಿಗೆ ಹೆಚ್ಚಿನ ತರಬೇತಿ ಕೊಟ್ಟು, ಅವರಲ್ಲಿ ಇಲ್ಲಿಯೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಅಗತ್ಯವಾಗಿದೆ. ಉದ್ಯೋಗ ದೃಷ್ಟಿಯಿಂದಲೂ ಇದು ಅನುಕೂಲವಾಗಲಿದೆ ಎಂದರು.
ಈ ಕೇಂದ್ರದಲ್ಲಿ ವಿವಿಧ ಕೌಶಲ್ಯಗಳ ಬಗ್ಗೆ ತರಬೇತಿ ಮತ್ತು ಮಾಹಿತಿ ನೀಡುವುದರ ಜೊತೆಗೆ ವಿವಿಧ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸೂಚಿಸುವ ಕೌಶಲ್ಯಗಳ ಬಗ್ಗೆಯೂ ತರಬೇತಿ ಕೊಡಲಾಗುವುದು ಎಂದು ತಿಳಿಸಿದರು. ಜಪಾನೀ ಭಾಷೆಯನ್ನು ಕಲಿಸುವ ಉದ್ದೇಶವನ್ನು ಎಫ್‌ಕೆಸಿಸಿಐ ಹೊಂದಿದೆ. ಜಪಾನಿ ಕಂಪೆನಿಗಳಲ್ಲಿ ಕೆಲಸ ಮಾಡುವಾಗ ಈ ಭಾಷೆ ಅನಿವಾರ್ಯವಾದ್ದರಿಂದ ಇದನ್ನು ಕಲಿಸಲು ತೀರ್ಮಾನಿಸಲಾಗಿದೆ. ಸಾಕಷ್ಟು ಉದ್ಯೋಗಾವಕಾಶದ ಭರವಸೆಯನ್ನು ಜಪಾನ್ ಕಂಪೆನಿಗಳು ನೀಡುತ್ತಿದ್ದು, ಇಲ್ಲಿನ ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತುಮಕೂರಿನಿಂದ ಶಿವಮೊಗ್ಗದವರೆಗೆ ಎನ್‌ಎಚ್ 206ನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ. ಇದು ಶಿವಮೊಗ್ಗದ ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗಲಿದೆ, ಅಲ್ಲದೇ ಸಾಕಷ್ಟು ಜನರಿಗೆ ಉದ್ಯೋಗಾವಕಾಶ ನೀಡಲಿದೆ ಎಂದು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಡಿ.ಎಂ. ಶಂಕರಪ್ಪ ವಹಿಸಿದ್ದರು.
ಈ ಸಂದರ್ಭದಲ್ಲಿ ಉತ್ತಮ ಮತ್ತು ಅತಿ ಹಳೆಯ ಸಂಸ್ಥೆಗಳಾದ ಶರಾವತಿ ಎಂಟರ್‌ಪ್ರೈಸಸ್, ಶಕ್ತಿ ಮೆಡಿಕಲ್ಸ್, ಶಾಪ್ ಆ್ಯಂಡ್ ಸೇವ್ ಸಂಸ್ಥೆಯ ಮಾಲಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಗುರುರಾಜ್, ಜೆ.ಆರ್. ವಾಸುದೇವ, ರುದ್ರೇಶ್, ಎಂ. ರಾಜು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಬಿ.ಆರ್. ಸಂತೋಷ್ ಸ್ವಾಗತಿಸಿದರು.







