ಸಂವಿಧಾನ ವಿರೋಧಿ ಬಿಜೆಪಿಗೆ ತಕ್ಕಪಾಠ ಕಲಿಸಿ: ಸಿದ್ದರಾಮಯ್ಯ

ಲಕ್ಷ್ಮೇಶ್ವರದ, ಡಿ.25: ಸಂವಿಧಾನ ಬದಲಾಯಿಸಲು ಮನುವಾದಿ ಚಿಂತನೆಯನ್ನು ಸಿದ್ಧಾಂತ ಮಾಡಿಕೊಂಡಿರುವ ಬಿಜೆಪಿಯನ್ನು ಜನರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರಬಾರದು ಎಂದು ಸಿಎಂ ಮನವಿ ಮಾಡಿದ್ದಾರೆ.
ಸೋಮವಾರ ಲಕ್ಷ್ಮೇಶ್ವರದ ಮುನ್ಸಿಪಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ರಾಜ್ಯ ಸರಕಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡುತ್ತಾರೆ, ಬಿ.ಎಸ್.ಯಡಿಯೂರಪ್ಪಅವರು ಗೋವಾ ಸಿಎಂ ಪರಿಕ್ಕರ್ ತಮಗೆ ಬರೆದಿರುವ ಪತ್ರವನ್ನು ಟ್ರಿಬ್ಯೂನಲ್ ಗೆ ನೀಡಿದರೆ ಮಹದಾಯಿ ಸಮಸ್ಯೆ ಬಗೆ ಹರಿಯುತ್ತದೆ ಎಂದು ವೇದಿಕೆಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ. ಇಂತಹ ಸುಳ್ಳುಗಾರರು ಹಾಗೂ ಮನುವಾದಿ ಚಿಂತನೆಯುಳ್ಳವರನ್ನು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರಬೇಡಿ ಎಂದು ಮನವಿ ಮಾಡಿದರು.
ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಮತಗಳಿಂದ ಗೆಲುವು ಕಂಡಿತು. ಇದರಿಂದ ಹತಾಶೆಗೊಂಡ ಯಡಿಯೂರಪ್ಪ, ಅಮಿತ್ ಶಾ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸುಳ್ಳು ಹೇಳಿ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಹೀಗಾಗಿ, ರಾಜ್ಯ ಕೊಳ್ಳೆ ಹೊಡೆದು ಜೈಲಿಗೆ ಹೋದ ಬಿಎಸ್ ವೈ, ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋದ ಅಮಿತ್ ಶಾ ಇಬ್ಬರ ಮಾತನ್ನೂ ಜನತೆ ನಂಬಬೇಡಿ, ಮತ ನೀಡಬೇಡಿ ಎಂದು ಕರೆ ನೀಡಿದರು.
ಬಿಜೆಪಿ ತಮಗೆ ಮೋಸ ಮಾಡಿದೆ ಎಂದು ಆರೋಪಿಸಿ ಬಿಎಸ್ ವೈ ಕೆಜೆಪಿ ಪಕ್ಷವನ್ನು ಸ್ಥಾಪಿಸಿದ್ದರು. ಆ ಸಂದರ್ಭದಲ್ಲಿ ಬಿಎಸ್‌ವೈ ಹಾಗೂ ಶೋಭಾ ಕರಂದ್ಲಾಜೆ ಅವರು ಟಿಪ್ಪು ಸುಲ್ತಾನ್ ವೇಷ ಧರಿಸಿದ್ದಲ್ಲದೇ ಟಿಪ್ಪು ಪರವಾಗಿ ಮಾತನಾಡಿದ್ದರು. ಆದರೆ, ಇಂದು ಅಧಿಕಾರದ ಆಸೆಗಾಗಿ ಟಿಪ್ಪುಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಯುಪಿ ಸಿಎಂ ಆದಿತ್ಯನಾಥ್ ರನ್ನು ಹುಬ್ಬಳಿಗೆ ಕರೆಯಿಸಿ ಟಿಪ್ಪು ವಿರೋಧವಾಗಿ ಮಾತನಾಡಲು ಹೇಳಿದ್ದಾರೆ. ಈ ಆದಿತ್ಯನಾಥ್‌ಗೆ ಇಲ್ಲಿ ಜನಿಸಿದ ಕ್ರಾಂತಿಕಾರಿಗಳಾದ ಬಸವಣ್ಣ, ಅಕ್ಕ ಮಹಾದೇವಿ, ಕನಕದಾಸ, ಸೂಫಿ ಸಂತರ ಬಗ್ಗೆ ಗೊತ್ತಿಲ್ಲ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಇವರನ್ನು ತಿರಸ್ಕರಿಸಿ ಕೋಮುವಾದಿಗಳಿಗೆ ತಕ್ಕ ಉತ್ತರ ನೀಡಿ ಎಂದು ಕರೆ ನೀಡಿದರು.
ಸಚಿವ ಎಚ್.ಕೆ.ಪಾಟೀಲ್, ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಜಿ.ಎಸ್.ಪಾಟೀಲ್, ಬಿ.ಆರ್.ಯಾವಗಲ್, ಮಾಜಿ ಶಾಸಕ ಡಿ.ಆರ್. ಪಾಟೀಲ್, ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಸಲೀಂ ಅಹ್ಮದ್, ಗದಗ ಜಿಪಂ ಅಧ್ಯಕ್ಷ ವಾಸಪ್ಪ, ಜಿಪಂ ಉಪಾಧ್ಯಕ್ಷ ರೂಪಾ ಅಂಗಡಿ, ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಜಾತಿ ಪದ್ಧತಿ ಮರುಸ್ಥಾಪನೆ ಬಿಜೆಪಿ ಉದ್ಧೇಶ
ಶೋಷಣೆ, ಜಾತಿ ಪದ್ಧತಿ, ಮೌಢ್ಯ, ಕಂದಾಚಾರ, ಜ್ಯೋತಿಷ್ಯ ಇವುಗಳನ್ನು ಮತ್ತೆ ಸ್ಥಾಪಿಸುವುದು ಬಿಜೆಪಿ ಉದ್ದೇಶವಾಗಿದೆ. ಈ ಅನಿಷ್ಟಗಳನ್ನು ತಿರಸ್ಕರಿಸಿದರೆ ಮಾತ್ರ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ದೊರೆಯುತ್ತದೆ. ಬಸವಣ್ಣ, ಅಂಬೇಡ್ಕರ್ ಕಂಡ ಸಮ ಸಮಾಜದ ಕನಸು ನನಸಾಗುತ್ತದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಮಿತ್ ಶಾ ಉತ್ತಮ ನಿರ್ದೇಶಕ
ಮಹದಾಯಿ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸಲು ಅಮಿತ್ ಶಾ ಉತ್ತಮ ಸ್ಕ್ರಿಪ್ಟ್ ತಯಾರು ಮಾಡಿಕೊಂಡು ನಿರ್ದೇಶನಕ್ಕೆ ನಿಂತಿದ್ದಾರೆ. ಗೋವಾ ಸಿಎಂ ಪಾರಿಕ್ಕರ್ ಹಾಗೂ ಮಾಜಿ ಸಿಎಂ ಬಿಎಸ್‌ವೈ ಅವರನ್ನು ಪಾತ್ರಧಾರಿಗಳನ್ನಾಗಿ ಮಾಡಿ ಸುಳ್ಳನ್ನು ನಿಜ ಎನ್ನುವಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ







