ಆರು ಸಿಕ್ಸರ್ ಸಿಡಿಸಿದ ದಾಂಡಿಗರ ಪಟ್ಟಿಗೆ ಶುಐಬ್ ಮಲಿಕ್ ಸೇರ್ಪಡೆ
ಕರಾಚಿ, ಡಿ.25: ಪಾಕಿಸ್ತಾನ ಆಲ್‌ರೌಂಡರ್ ಶುಐಬ್ ಮಲಿಕ್ ಒಂದೇ ಓವರ್‌ನಲ್ಲಿ ಆರು ಸಿಕ್ಸ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಫೈಸಲಾಬಾದ್‌ನಲ್ಲಿ ಶಾಹಿದ್ ಅಫ್ರಿದಿ ಫೌಂಡೇಶನ್ ಆಯೋಜಿಸಿದ್ದ ಟಿ-10 ಸಹಾಯಾರ್ಥ ಪಂದ್ಯದಲ್ಲಿ ಮಲಿಕ್ ಈ ಸಾಧನೆ ಮಾಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಮಲಿಕ್ ಅವರು ಶಾಹಿದ್ ಅಫ್ರಿದಿ ಫೌಂಡೇಶನ್ ರೆಡ್ ಟೀಮ್ ತಂಡದ ಪರ ಆಡಿದ್ದು, ಶಾಹಿದ್ ಅಫ್ರಿದಿ ಫೌಂಡೇಶನ್ ಗ್ರೀನ್ ಟೀಮ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಮಲಿಕ್ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ಬಲಗೈ ಸ್ಪಿನ್ನರ್ ಬಾಬರ್ ಆಝಂ ಎಸೆತದಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದರು. ಮಲಿಕ್ ಸಾಹಸದ ನೆರವಿನಿಂದ ರೆಡ್ ಟೀಮ್ ನಿಗದಿತ 10 ಓವರ್‌ಗಳಲ್ಲಿ 201 ರನ್ ಗಳಿಸಿತು. ಆದರೆ ಪಂದ್ಯದಲ್ಲಿ ಜಯ ಸಾಧಿಸಲು ವಿಫಲವಾಯಿತು.
ಬಾಬರ್ ಆಝಂ 26 ಎಸೆತಗಳಲ್ಲಿ ಶತಕ ಪೂರೈಸಿ ತಕ್ಕ ಸೇಡು ತೀರಿಸಿಕೊಂಡರು. ಗ್ರೀನ್ ತಂಡಕ್ಕೆ 9 ವಿಕೆಟ್‌ಗಳ ಗೆಲುವು ತಂದರು.
ಇತ್ತೀಚೆಗೆ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂತರ್-ಜಿಲ್ಲಾ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಜಾಮ್‌ನಗರ ಹಾಗೂ ಅಮ್ರೆಲಿ ತಂಡಗಳ ನಡುವಿನ ಪಂದ್ಯದಲ್ಲಿ ಒಂದೇ ಓವರ್‌ಗೆ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು.
ಜಾಮ್‌ನಗರ ಜಿಲ್ಲೆಯನ್ನು ಪ್ರತಿನಿಧಿಸಿದ ಜಡೇಜ ಕೇವಲ 69 ಎಸೆತಗಳಲ್ಲಿ 154 ರನ್ ಗಳಿಸಿ ತನ್ನ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 239 ರನ್‌ಗೆ ತಲುಪಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕದ ಹರ್ಷಲ್ ಗಿಬ್ಸ್ ಹಾಗೂ ಭಾರತದ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದರು. 2007ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ ಹಾಲೆಂಡ್‌ನ ಡ್ಯಾನ್ ವಾನ್ ಬೌಲಿಂಗ್‌ನಲ್ಲಿ ಗಿಬ್ಸ್ ದಾಖಲೆ ನಿರ್ಮಿಸಿದ್ದರು. ಯುವರಾಜ್ ಸಿಂಗ್ 2007ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಸರ್ ಗ್ಯಾರಿ ಸೋಬರ್ಸ್ 1968ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಹಾಗೂ ಗ್ಲಾಮೊರ್ಗನ್ ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. 16 ವರ್ಷಗಳ ಬಳಿಕ 1985ರಲ್ಲಿ ಮುಂಬೈನಲ್ಲಿ ನಡೆದ ರಣಜಿ ಟ್ರೋಫಿಯಲ್ಲಿ ರವಿ ಶಾಸ್ತ್ರಿ ಬಾಂಬೆ ಹಾಗೂ ಬರೋಡಾ ನಡುವೆ ನಡೆದಿದ್ದ ಪಂದ್ಯದ ವೇಳೆ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು.







