ಬಜ್ಪೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಲಾಠಿಚಾರ್ಜ್ ನಡೆದಿಲ್ಲ: ಇನ್ಸ್‌ಪೆಕ್ಟರ್ ಪರಶಿವ ಮೂರ್ತಿ
ಮಂಗಳೂರು, ಡಿ.25: ಎರಡು ಬಸ್ಸುಗಳ ಸಿಬ್ಬಂದಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಜನ ಸೇರಿದ್ದರಿಂದ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಸೋಮವಾರ ರಾತ್ರಿ ಬಜ್ಪೆ ಜಂಕ್ಷನ್‌ನಲ್ಲಿ ನಡೆದಿದೆ.
ಎರಡು ಖಾಸಗಿ ಬಸ್‌ಗಳ ಕಂಡಕ್ಟರ್‌ಗಳ ನಡುವಿನ ಮಾತುಕತೆಯು ವಿಕೋಪಕ್ಕೇರಿ ಜನ ಸೇರಿದ ಪರಿಣಾಮ ಬಜ್ಪೆ ಜಂಕ್ಷನ್‌ನಲ್ಲಿ ಬಿಗುವಿನ ವಾತಾವರಣ ಏರ್ಪಟಿತ್ತು. ಈ ಇಬ್ಬರು ಕಂಡಕ್ಟರ್‌ಗಳ ನಡುವೆ ಹಿಂದೆಯೂ ಬಸ್ ಟೈಮಿಂಗ್ ವಿಚಾರದಲ್ಲಿ ಮನಸ್ತಾಪ ಇತ್ತೆನ್ನಲಾಗಿದೆ. ಇದೇ ವಿಚಾರವಾಗಿ ಈ ಅಹಿತಕರ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಸಂಘಟನೆಯ ಕೆಲವರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಹತ್ತಿರದಲ್ಲೇ ಕರ್ತವ್ಯ ನಿರತರಾಗಿದ್ದ ಬಜ್ಪೆ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಪರಶಿವ ಮೂರ್ತಿ ಎರಡೂ ಕಡೆಯವರ ಮಾತನ್ನು ಆಲಿಸಿದ್ದು, ಯಾವುದೇ ತಕರಾರು ಇದ್ದರೂ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ. ಆದರೆ, ಇದಕ್ಕೆ ಸೊಪ್ಪು ಹಾಕದೆ ಗುಂಪು ಸ್ಥಳದಲ್ಲೇ ಠಿಕಾಣಿ ಹೂಡಿದ್ದರೆನ್ನಲಾಗಿದೆ. ಈ ವೇಳೆ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಇನ್‌ಸ್ಪೆಕ್ಟರ್ ಸೂಚಿಸಿದ್ದಾರೆ. ಆದರೆ, ಸ್ಥಳದಿಂದ ಯಾರೂ ಕದಲದೇ ಇದ್ದುದರಿಂದ ಗುಂಪನ್ನು ಚದುರಿಸಲು ಲಾಠಿ ಬೀಸಿದ್ದು, ಈ ಸಂದರ್ಭದಲ್ಲಿ ಹುಡುಗನಿಗೆ ತಾಗಿದೆ ಎಂದು ಮೂಲಗಳು ತಿಳಿಸಿವೆ.
‘ಯಾರ ಮೇಲೂ ಹಲ್ಲೆ ನಡೆಸಿಲ್ಲ’
ಘಟನೆಯ ಬೆನ್ನಲ್ಲೇ ‘‘ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ’’ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ಪರಶಿವ ಮೂರ್ತಿ, ‘‘ಯಾರ ಮೇಲೂ ಪೊಲೀಸರು ಹಲ್ಲೆ ನಡೆಸಿಲ್ಲ.
ಯಾರಿಗಾದರೂ ಯಾರಿಂದಲೂ ಅನ್ಯಾಯವಾಗಿದ್ದರೆ ಠಾಣೆಗೆ ಬಂದು ದೂರು ನೀಡುವಂತೆ ಹೇಳಿದ್ದೇನೆ. ಆದರೆ, ಹಾಗೆ ಮಾಡದೆ 50ಕ್ಕೂ ಮಿಕ್ಕಿ ಜನರು ಸೇರಿದ್ದರಿಂದ ಗುಂಪನ್ನು ಚದುರಿಸಲು ಲಾಠಿ ಬೀಸಿದಾಗ ತಾಗಿರಬಹುದು’’ ಎಂದು ಹೇಳಿದ್ದಾರೆ.







