ಸಂವಿಧಾನ ಬದಲಾವಣೆಗೆ ಮುಂದಾದರೆ ದೇಶದಲ್ಲಿ ದಂಗೆಯಾಗಲಿದೆ: ಬಿಜೆಪಿ ಮುಖಂಡರಿಗೆ ಸಿಎಂ ಎಚ್ಚರಿಕೆ
'ಕೇಂದ್ರ ಸಚಿವ ಹೆಗಡೆಗೆ ಗ್ರಾಪಂ ಅಧ್ಯಕ್ಷನಾಗುವ ಯೋಗ್ಯತೆಯೂ ಇಲ್ಲ'

ದಾವಣಗೆರೆ, ಡಿ. 26: ದೇಶದ ಸಂವಿಧಾನವನ್ನು ಬದಲಾವಣೆ ಮಾಡಲು ಯಾರಾದರೂ ಮುಂದಾದರೆ ದೇಶದಲ್ಲಿ ದಂಗೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ 672 ಕೋಟಿ ರೂ. ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಸೇರಿದಂತೆ ಶೋಷಿತರು ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಬದಲಾವಣೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯ ಸರಕಾರ 2018ರ ಫೆಬ್ರವರಿಗೆ 2.10 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಕಟಿಸಿದರು. ರಾಜ್ಯ ಸರಕಾರ ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿ ಮಾರ್ಗದಲ್ಲಿ ನಡೆಯುತ್ತಿದೆ. ಸಮಾಜದ ಕಟ್ಟಕಡೆಯ ಮನುಷ್ಯನನ್ನು ಮುಖ್ಯವಾಹಿನಿಗೆ ತರಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಬೇಕು ಎಂದು ಅದಕ್ಕಾಗಿ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ, ಮೈತ್ರಿ, ಮನಸ್ವಿನಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಬಡವರ ಸಾಲ ಮನ್ನಾ ಮಾಡಿದ್ದೇವೆ. ಬಡವ ಯಾವುದೇ ಸಮಾಜ, ಧರ್ಮಕ್ಕೆ ಸೇರಿರಲಿ, ಅವನಿಗೆ ಬಟ್ಟೆ, ಶಿಕ್ಷಣ, ಆರೋಗ್ಯ, ಅನ್ನ ದೊರೆಯಬೇಕು ಎನ್ನುವುದೇ ನಮ್ಮ ಸರಕಾರದ ಮುಖ್ಯ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದರು.
ಗ್ರಾ.ಪಂ.ಅಧ್ಯಕ್ಷನಾಗುವ ಯೋಗ್ಯತೆ ಇಲ್ಲ
ಸಂವಿಧಾನ ಬದಲಾವಣೆ ಮಾಡುತ್ತೆವೆಂದು ಹೇಳುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಗ್ರಾಪಂ ಅಧ್ಯಕ್ಷನಾಗುವ ಯೋಗ್ಯತೆಯೂ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಸಂಘ ಪರಿವಾರದ ಹಿಡನ್ ಅಜೆಂಡಾವನ್ನು ಅನಂತ್ ಕುಮಾರ್ ಹೆಗಡೆ ಮೂಲಕ ಪ್ರಧಾನಿ ಮೋದಿಯವರೇ ಹೇಳಿಸಿದಂತಿದೆ. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬಿಜೆಪಿಯವರಿಗೆ ಎರಡು ನಾಲಗೆ
ಬಿಜೆಪಿಯವರಿಗೆ ಎರಡು ನಾಲಗೆ ಮತ್ತು ಎರಡು ಮುಖಗಳಿವೆ. ಟಿಪ್ಪುಸುಲ್ತಾನ್ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪ ಕೆಜಿಪಿ ಪಕ್ಷದಲ್ಲಿದ್ದಾಗ ಸ್ವತಃ ಟಿಪ್ಪು ಪೋಷಾಕು ಧರಿಸಿ, ಕೈಯಲ್ಲಿ ಖಡ್ಗ ಹಿಡಿದುಕೊಂಡಿದ್ದರು. ಇದೀಗ ಟಿಪ್ಪು ಜಯಂತಿ ವಿರೋಧ ಮಾಡುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು.
ಅತ್ಯಂತ ಲಜ್ಜೆಗೆಟ್ಟವರು ಎಂದರೆ ಬಿಜೆಪಿಯವರು. ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇವರು ಅಧಿಕಾರದಲ್ಲಿ ಇದ್ದಾಗ ಒಂದು. ಅಧಿಕಾರ ಇಲ್ಲದೆ ಇರುವಾಗ ಮತ್ತೊಂದು. ಇಂತಹವರನ್ನು ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಮರುಳಾಗಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ಸಂಸತ್ ಗೆ ಮುತ್ತಿಗೆ ಹಾಕಿ ರಾಜ್ಯದ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ನೀಡಿರುವ 42 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿಸಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿದ 600 ಕೋಟಿ ರೂ.ಹಣದ ಬಡ್ಡಿ ಹಣದಲ್ಲಿ ಅಪ್ಪ-ಮಕ್ಕಳು ಜೀವನ ಮಾಡುತ್ತಿದಾರೆಂದು ಬಿಎಸ್ ವೈ ಹೇಳಿಕೆ ನೀಡಿದ್ದಾರೆ. ಆದರೆ, ನಾವಿಬ್ಬರು ಸ್ವಂತ ನಾವು ಗಳಿಸಿದ ಹಣದಲ್ಲಿ ಜೀವನ ಮಾಡುತ್ತಿದ್ದೇವೆ. ಹೀಗಾಗಿ ಸ್ಮಾರ್ಟ್ ಸಿಟಿ ಯೋಜನೆ ಹಣದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ. ಈ ಬಗ್ಗೆ ಶೀಘ್ರವೇ ಶ್ವೇತಪತ್ರವನ್ನು ಹೊರಡಿಸುತ್ತೆನೆ'
-ಎಸ್.ಎಸ್.ಮಲ್ಲಿಕಾರ್ಜುನ್ , ಜಿಲ್ಲಾ ಉಸ್ತುವಾರಿ ಸಚಿವ ದಾವಣಗೆರೆ







