107 ವರ್ಷದ ವೃದ್ಧೆಗೆ ಹುಟ್ಟುಹಬ್ಬದ ಶುಭ ಹಾರೈಸಿದ ರಾಹುಲ್ ಗಾಂಧಿ
ರಾಹುಲ್ ಬಗ್ಗೆ ತನ್ನ ಮೊಮ್ಮಗಳ ಜೊತೆ ಈ ಮಹಿಳೆ ಹೇಳಿದ್ದೇನು?

ಹೊಸದಿಲ್ಲಿ, ಡಿ.26 : ತನ್ನನ್ನು ಭೇಟಿಯಾಗಲು ಬಯಸಿದ್ದ 107 ವರ್ಷದ ವೃದ್ಧೆಯೊಬ್ಬರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲು ಗಾಂಧಿ ಹುಟ್ಟುಹಬ್ಬದ ಶುಭಾಶಯ ಕೋರಿ, ಟ್ವಿಟರಿಗರ ಮನ ಗೆದ್ದಿದ್ದಾರೆ.
ಡಿಸೆಂಬರ್ 25ರಂದು 107 ವರ್ಷದ ವೃದ್ಧೆಯ ಹುಟ್ಟುಹಬ್ಬದ ದಿನವಾಗಿತ್ತು. ವೃದ್ಧೆಯ ಮೊಮ್ಮಗಳು ಸಂಭ್ರಮಾಚರಣೆ ಫೋಟೊವೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ರಾಹುಲ್ ಗಾಂಧಿಯವರನ್ನು ಆ ಪೋಸ್ಟ್ ಗೆ ಟ್ಯಾಗ್ ಮಾಡಿದ್ದರು.
“ಇಂದು ನನ್ನ ಅಜ್ಜಿಗೆ 107ನೆ ವರ್ಷದ ಸಂಭ್ರಮ. ರಾಹುಲ್ ಗಾಂಧಿಯವರನ್ನು ಭೇಟಿಯಾಗಬೇಕೆನ್ನುವುದು ಅವರ ಆಸೆಯಾಗಿದೆ. ಯಾಕೆಂದು ನಾನು ಕೇಳಿದಾಗ ರಾಹುಲ್ ಸುಂದರವಾಗಿದ್ದಾರೆ ಎಂದು ಅಜ್ಜಿ ಪಿಸುಮಾತಲ್ಲಿ ಹೇಳಿದರು” ಎಂದು ದೀಪಾಲಿ ಸಿಕಂದ್ ಎಂಬ ಯುವತಿ ಟ್ವೀಟ್ ಮಾಡಿದ್ದರು.
ಕೆಲವೇ ಗಂಟೆಗಳಲ್ಲಿ ಆಕೆಗೆ ರಾಹುಲ್ ಗಾಂಧಿಯ ಪ್ರೀತಿಯ ನಾಯಿ ಪಿಡಿಯಿಂದ ಒಂದು ಸಂದೇಶ ಬಂದಿತ್ತು. ಆ ಪುಟ್ಟ ಸಂದೇಶಕ್ಕೆ ರಾಹುಲ್ ಅವರೇ ಸಹಿ ಹಾಕಿದ್ದರಲ್ಲದೆ ತಮ್ಮ ಪರವಾಗಿ ದೊಡ್ಡ ಆಲಿಂಗನ ನೀಡಿ ಎಂದು ಬರೆದಿದ್ದರು. ಸಂಜೆಯ ಹೊತ್ತಿಗೆ ಅಜ್ಜಿಯ ಮೊಮ್ಮಗಳು ದೀಪಾಲಿ ಸಿಕಂದ್ ಮತ್ತೊಂದು ಟ್ವೀಟ್ ಮಾಡಿ “ರಾಹುಲ್ ಸ್ವತಃ ನನಗೆ ಕರೆ ಮಾಡಿ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ” ಎಂದು ಬರೆದಿದ್ದರು.
ಪ್ರಧಾನಿ ಮೋದಿಗೆ ಹೋಲಿಸಿದಾಗ ರಾಹುಲ್ ಅವರು ಬಹಳ ತಡವಾಗಿ ಟ್ವಿಟ್ಟರ್ ಪ್ರವೇಶ ಮಾಡಿದವರು. ತಮ್ಮ ಚತುರ ಟ್ವೀಟ್ ಗಳಿಂದ ಸಾಕಷ್ಟು ಗಮನ ಸೆಳೆದಿರುವ ರಾಹುಲ್ ತಮ್ಮ ಟ್ವೀಟ್ ಗಳಿಗೆ ತಮ್ಮ ಪ್ರೀತಿಯ ನಾಯಿ ಪಿಡಿ ಕಾರಣವೆಂದೂ ಹೇಳಿ ತಮ್ಮ ಟೀಕಾಕಾರರ ಬಾಯ್ಮುಚ್ಚಿಸಿದ್ದರು.







