"ಮಹಾದಾಯಿ ಹೋರಾಟ ಕಾಂಗ್ರೆಸ್ ಪ್ರೇರಿತವೆಂದು ಸಾಬೀತಾದರೆ ವಿಷ ಕುಡಿಯಲು ಸಿದ್ಧ"
ಬಿಜೆಪಿ ನಾಯಕರಿಗೆ ರೈತ ಹೋರಾಟಗಾರ ಪಂಚನಗೌಡ ಸವಾಲು

ಬೆಂಗಳೂರು, ಡಿ.26: ಮಹಾದಾಯಿ ಹೋರಾಟ ಕಾಂಗ್ರೆಸ್ ಪ್ರೇರಿತವೆಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಆರೋಪ ಸಾಬೀತು ಪಡಿಸಿದರೆ ವಿಷ ಕುಡಿಯಲು ಸಿದ್ಧ ಎಂದು ಮಹಾದಾಯಿ ರೈತ ಹೋರಾಟಗಾರ ಪಂಚನಗೌಡ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಪಂಚನಗೌಡ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪಂಚನಗೌಡ, ಮೂರು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಕಣಕುಂಬಿ ಸಮಾವೇಶದ ನಂತರ ಪಕ್ಷ ತೊರೆದಿರುವುದಾಗಿ ಸ್ಪಷ್ಟಪಡಿಸಿದ ಅವರು, ಮಹಾದಾಯಿ ಹೋರಾಟ ಕಾಂಗ್ರೆಸ್ ಪ್ರೇರಿತ ಎಂಬುದಕ್ಕೆ ಸಾಕ್ಷ್ಯ ಒದಗಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ನಾಯಕರು ಪಲಾಯನವಾದ ಉದ್ದೇಶದಿಂದ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಮೊದಲು ಸರಿಯಾದ ಮಾಹಿತಿ ಪಡೆಯಲಿ ಎಂದು ಪಂಚನಗೌಡ ಹೇಳಿದರು.
ಮಹಾದಾಯಿ ಹೋರಾಟಗಾರ ವೀರೇಶ್ ಸೊಬರದ್ ಬಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಯಡಿಯೂರಪ್ಪನವರು ಮಾತು ಕೊಟ್ಟಿದ್ದಕ್ಕೆ ನಾವು ಅವರನ್ನು ನಂಬಿದ್ದೆವು. ಇದೀಗ ಮಾತು ತಪ್ಪಿದ್ದಕ್ಕೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ನಾನು ರೈತ ಮುಖಂಡ ಎನ್ನುತ್ತಾರೆ. ಹಸಿರು ಶಾಲು ಹಾಕಿಕೊಂಡು ಪೋಸ್ ಕೊಡುತ್ತಾರೆ. ಈಗ ಸಮಸ್ಯೆ ಪರಿಹರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ನೇರವಾಗಿ ಸಮಸ್ಯೆ ಪರಿಹರಿಸಲು ಆಗುವುದಿಲ್ಲ ಎಂದು ಹೇಳಿಬಿಡಲಿ. ಈ ಸುಳ್ಳು ಹೇಳಿಕೊಂಡು ನಮ್ಮನ್ನು ದಾರಿ ತಪ್ಪಿಸುವುದು ಬೇಡ ಎಂದು ತಿಳಿಸಿದರು.







