ಮೂಲಭೂತ ಸೌಲಭ್ಯಗಳು ಕಲ್ಪಿಸಲು ಆಗ್ರಹಿಸಿ ಡಿ.27 ರಂದು ಧರಣಿ
ಬೆಂಗಳೂರು, ಡಿ. 26: ಸರ್.ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೋಲೆರಮ್ಮ ಸ್ಲಂಗೆ ಮೂಲಭೂತ ಸೌಲಭ್ಯಗಳು ಕಲ್ಪಿಸಬೇಕು ಎಂದು ಆಗ್ರಹಿಸಿ ಡಿ.27 ರಂದು ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿ ಎದುರು ಎಸ್ಸಿ, ಎಸ್ಟಿ ಹಕ್ಕು ರಕ್ಷಣಾ ಸಂಘಟನೆ ವತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ವಿ.ತುಳಸಿ ಪ್ರಕಾಶ್, ಪೋಲೆರಮ್ಮ ಸ್ಲಂನಲ್ಲಿ ಹತ್ತಾರು ವರ್ಷಗಳಿಂದ 300 ಕ್ಕೂ ಅಧಿಕ ಕುಟುಂಬಗಳಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ರಸ್ತೆ, ಚರಂಡಿ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿವೇಶನ ರಹಿತರಿಗೆ ಮನೆಗಳನ್ನು ಕಟ್ಟಿಕೊಡಬೇಕು. ಕೊಳಚೆ ಪ್ರದೇಶವನ್ನು ಮೇಲ್ದರ್ಜೆಗೇರಿಸಬೇಕು. ಶಾಲಾ-ಕಾಲೇಜು ಸ್ಥಾಪನೆಗೆ ಆದ್ಯತೆ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಇಂದು ಬೆಳಗ್ಗೆ 8 ಗಂಟೆಗೆ ಕಾಕ್ಸ್ ಟೌನ್‌ನಿಂದ ಕಾಲುನಡಿಗೆ ಮೂಲಕ ಮಕ್ಕಳು, ಮಹಿಳೆಯರು, ವಿದ್ಯಾರ್ಥಿ ಹಾಗೂ ಯುವಜನರು ಸೇರಿದಂತೆ ನೂರಾರು ಜನರು ಜಂಟಿ ಆಯುಕ್ತರ ಕಚೇರಿವರೆಗೂ ಮೆರವಣಿಗೆ ಮೂಲಕ ಆಗಮಿಸಲಿದ್ದಾರೆ ಎಂದು ವಿವರಿಸಿದರು.





