ಗೃಹ ರಕ್ಷಕರಿಗೆ ಸೂಕ್ತ ಸೌಲಭ್ಯ: ರಾಮಲಿಂಗಾರೆಡ್ಡಿ

ಬೆಂಗಳೂರು, ಡಿ.26: ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಸಂದರ್ಭಗಳಲ್ಲಿ ಪೊಲೀಸರಿಗೆ ನೀಡುವ ಸೌಲಭ್ಯಗಳನ್ನೆ ಗೃಹ ರಕ್ಷಕರಿಗೂ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಮಂಗಳವಾರ ನಗರದ ಸಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೃಹ ರಕ್ಷಕ ಸಿಬ್ಬಂದಿಗೆ ಪೊಲೀಸರಿಗೆ ನೀಡುವ ಆರೋಗ್ಯ, ಕ್ಯಾಂಟೀನ್ ಇನ್ನಿತರ ಸೌಲಭ್ಯಗಳನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದರು.
28 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗಿದೆ. ನೇಮಕಾತಿ ಸಂದರ್ಭದಲ್ಲಿ ಗೃಹ ರಕ್ಷಕರಾಗಿ ಕೆಲಸ ನಿರ್ವಹಿಸಿದವರನ್ನು ಪರಿಗಣಿಸಿದ್ದೇವೆ ಎಂದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ರಕ್ಷಕರು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಹಲವು ಸೌಲಭ್ಯಗಳನ್ನು ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿ, ಪ್ರಕೃತಿ ವಿಕೋಪ, ಸಂಚಾರಿ ದಟ್ಟಣೆ ನಿಯಂತ್ರಣ ಮುಂತಾದ ಸಂದರ್ಭಗಳಲ್ಲಿ ಅವರ ಸೇವೆ ಅಮೂಲ್ಯವಾಗಿದೆ. ಗೃಹ ರಕ್ಷಕ ದಳದವರು ಈವರೆಗೆ ಪೊಲೀಸರ ಬ್ಯಾಂಡ್‌ಅನ್ನು ಎರವಲಾಗಿ ಪಡೆಯುತ್ತಿದ್ದರು. ಈಗ ಅವರು ಸ್ವಂತ ಬ್ಯಾಂಡ್ ಹೊಂದಿದ್ದು, ಅದು ಅನುಕೂಲವಾಗಿದೆ ಎಂದು ರಾಮಲಿಂಗಾರೆಡ್ಡಿ ನುಡಿದರು.
ಕಾರ್ಯಕ್ರಮದಲ್ಲಿ ಆರಕ್ಷಕ ಮಹಾನಿರ್ದೇಶಕರು, ಗೃಹ ರಕ್ಷಕ ದಳದ ಮಹಾಸಮಾದೇಷ್ಟರು ಮತ್ತು ನಿರ್ದೇಶಕರಾದ ಎಂ.ಎನ್.ರೆಡ್ಡಿ , ಉಪಮಹಾ ಸಮಾದೇಷ್ಟರು, ಉಪ ಪೊಲೀಸ್ ಆಯುಕ್ತ (ಆಡಳಿತ) ಭೂಷಣ್ ಗುಲಾಬ್‌ರಾವ್ ಬೋರಸೆ, ಗೃಹರಕ್ಷಕ ದಳ ಸಮಾದೇಷ್ಟರು ಡಾ.ಬಿ.ಅಮರನಾಥ್, ಹಿರಿಯ ಅಧಿಕಾರಿ ರಾಚಪ್ಪ ಸೇರಿ ಪ್ರಮುಖರಿದ್ದರು.







