ನವೆಂಬರ್: ಜಿಎಸ್‌ಟಿ ಸಂಗ್ರಹ 80,808 ಕೋಟಿ ರೂ.ಗೆ ಕುಸಿತ

ಹೊಸದಿಲ್ಲಿ, ಡಿ.26: ನವೆಂಬರ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹವು ಗಣನೀಯವಾಗಿ ಕುಸಿದಿದ್ದು 80,808 ಕೋಟಿ ರೂ.ಗೆ ಕುಸಿದಿದೆ. ಅಕ್ಟೋಬರ್‌ನಲ್ಲಿ ಈ ಪ್ರಮಾಣವು ರೂ. 83,000 ಕೋಟಿಯಿತ್ತು ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 25ರ ವರೆಗೆ 80,808 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆಯು ಸಂಗ್ರಹವಾಗಿದ್ದು, 53.06 ಲಕ್ಷ ಆದಾಯ ತೆರಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸಂಗ್ರಹವಾದ 80,808 ಕೋಟಿ ರೂ. ಜಿಎಸ್‌ಟಿಯಲ್ಲಿ ರೂ. 7,798 ಕೋಟಿ ಪರಿಹಾರ ಸೆಸ್ ರೂಪದಲ್ಲಿ ಪಡೆದಂತವಾಗಿವೆ ಎಂದು ವರದಿ ತಿಳಿಸಿದೆ.
13,089 ಕೋಟಿ ರೂ. ಕೇಂದ್ರ ಜಿಎಸ್‌ಟಿ, 18,650 ಕೋಟಿ ರೂ. ರಾಜ್ಯ ಜಿಎಸ್‌ಟಿ ಮತ್ತು 41,270 ಕೋಟಿ ರೂ. ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ ರೂಪದಲ್ಲಿ ಸಂಗ್ರಹವಾಗಿದೆ. ಅಂಕಿಅಂಶಗಳ ಪ್ರಕಾರ ಜುಲೈ ತಿಂಗಳಲ್ಲಿ ರೂ. 95,000 ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದ್ದರೆ, ಆಗಸ್ಟ್‌ನಲ್ಲಿ ರೂ. 91,000 ಕೋಟಿ, ಸೆಪ್ಟೆಂಬರ್‌ನಲ್ಲಿ ರೂ. 92,150 ಕೋಟಿ ಮತ್ತು ಅಕ್ಟೋಬರ್‌ನಲ್ಲಿ 83,000 ಕೋಟಿ ಸರಕು ಮತ್ತು ಸೇವಾ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.







