2015-16ನೆ ಸಾಲಿಗೆ ಸ್ಥಿರಾಸ್ತಿ ವಿವರಗಳನ್ನು ಇನ್ನೂ ಸಲ್ಲಿಸದ 280 ಐಎಎಸ್ ಅಧಿಕಾರಿಗಳು!

ಹೊಸದಿಲ್ಲಿ, ಡಿ.26: 2015-16ನೇ ಸಾಲಿಗೆ ತಮ್ಮ ಸ್ಥಿರಾಸ್ತಿಗಳ ವಿವರ(ಐಪಿಆರ್) ಗಳನ್ನು 2018,ಜ.31ರ ಗಡುವಿನೊಳಗೆ ಸಲ್ಲಿಸುವಂತೆ ಕೇಂದ್ರ ಸರಕಾರವು 280 ಐಎಎಸ್ ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.
ಈ ಐಪಿಆರ್‌ಗಳ ಸಲ್ಲಿಕೆಗೆ 2017,ಜ.31 ಅಂತಿಮ ದಿನಾಂಕವಾಗಿತ್ತು.
ಆಸ್ತಿ ವಿವರಗಳನ್ನು ಸಲ್ಲಿಸಲು ವಿಫಲಗೊಂಡರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿ.22ರ ಸರಕಾರಿ ಪತ್ರದಲ್ಲಿ ತಿಳಿಸಲಾಗಿದೆ.
ಸರಕಾರವು ಕಳೆದ ವರ್ಷ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಪಾರದರ್ಶಕ ಗೊಳಿಸಲು ಅಧಿಕಾರಿಗಳು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಂಭಿಸಿತ್ತು.
ಅದಕ್ಕೂ ಮೊದಲು ಅಧಿಕಾರಿಗಳು ತಮ್ಮ ಐಪಿಆರ್‌ಗಳನ್ನು ತಮ್ಮ ಕೇಡರ್ ಕಂಟ್ರೋಲಿಂಗ್ ಅಧಿಕಾರಿಗಳಿಗೆ ಸಲ್ಲಿಸಬೇಕಿತ್ತು ಮತ್ತು ಅವರು ಅವುಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಕಳುಹಿಸುತ್ತಿದ್ದರು. ರವಾನೆ ಸಂದರ್ಭ ಹಲವಾರು ಕಡತಗಳು ಕಳೆದುಹೋಗುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದರು.
ನಿಯಮಾವಳಿಗಳಂತೆ ಐಎಎಸ್ ಅಧಿಕಾರಿಗಳು ತಮ್ಮ ಆಸ್ತಿಗಳು ಮತ್ತು ಬಾಧ್ಯತೆಗಳ ವಿವರಗಳನ್ನು ಸರಕಾರಕ್ಕೆ ಸಲ್ಲಿಸಬೇಕಾಗುತ್ತದೆ. 5,000 ರೂ.ಗೂ ಅಧಿಕ ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸುವ ಮುನ್ನ ಅವರು ಸರಕಾರದ ಅನುಮತಿ ಪಡೆದು ಕೊಳ್ಳಬೇಕಾಗುತ್ತದೆ ಮತ್ತು ಸಂಬಂಧಿಗಳಿಂದ 25,000 ರೂ.ಗೂ ಅಧಿಕ ವೌಲ್ಯದ ಉಡುಗೊರೆಗಳನ್ನು ಸ್ವೀಕರಿಸಿದರೆ ಸರಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ.







