ಭಟ್ಕಳ: ಎಪಿಸಿಆರ್ ಸಂಸ್ಥೆಯಿಂದ ಕಾನೂನು ಜಾಗೃತಿ ಸಭೆ
.jpg)
ಭಟ್ಕಳ, ಡಿ. 26: ಯಾವುದೇ ರೀತಿಯ ಗಲಭೆ ದೊಂಬಿ, ಘರ್ಷಣೆಗಳ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದೆ ಸಂತೃಸ್ಥರ ಪರವಾಗಿ ಕಾನೂನು ಹೋರಾಟವೊಂದೇ ನಮ್ಮ ಮುಂದಿರುವ ಆಯ್ಕೆಯಾಗಬೇಕು ಎಂದು ಮಾನವ ಹಕ್ಕು ಸಂರಕ್ಷಣಾ ಸಂಸ್ಥೆ ಎಪಿಸಿಆರ್ ರಾಜ್ಯಾಧ್ಯಕ್ಷ ಹೈಕೋರ್ಟ್ ನ್ಯಾಯಾವಾದಿ ಸಾದುದ್ದೀನ್ ಸಾಲಿಹಿ ಹೇಳಿದರು.
ಅವರು ಮಂಗಳವಾರ ನವಾಯತ್ ಕಾಲೋನಿಯ ರಾಬಿತಾ ಸೂಸೈಟಿ ಸಭಾಂಗಣದಲ್ಲಿ ಉತ್ತರಕನ್ನಡ ಜಿಲ್ಲಾ ಮುಸ್ಲಿಮ್ ಮುಖಂಡರ ಸಭೆಯಲ್ಲಿ ಕಾನೂನು ಜಾಗೃತಿ ಕುರಿತಂತೆ ಮಾತನಾಡಿದರು.
ಇತ್ತಿಚೆಗೆ ಜಿಲ್ಲೆಯಲ್ಲಿ ಉಂಟಾದ ಕೋಮುಗಲಭೆ ಪ್ರಕರಣದಲ್ಲಿ ಅಮಾಯಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಫ್ಯಾಸಿಷ್ಟ್ ಶಕ್ತಿಗಳು ಕಲ್ಲು ತೂರಾಟ, ಮಸೀದಿ ಮನೆಗಳಿಗೆ ಬೆಂಕಿ ಹಚ್ಚುವುದರ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಜಿಲ್ಲೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು ಸಂತೃಸ್ಥರಿಗೆ ಕಾನೂನು ನೆರವು ನೀಡುವುದರ ಮೂಲಕ ಅವರಲ್ಲಿ ಕಾನೂನು ಕುರಿತಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ಅರಾಜಕತೆ ಸೃಷ್ಟಿಸುವುದರ ಮೂಲಕ ರಾಜಕೀಯ ಲಾಭಗಳಿಸಿಕೊಳ್ಳುವ ದುಷ್ಟರಿಂದ ಎಚ್ಚರಿಕೆಯಿಂದಿದ್ದು ಯಾವುದೇ ರೀತಿಯ ಕಾನೂನು ಭಂಜಕ ಕೃತ್ಯಗಳಿಂದ ಸಮುದಾಯದ ಯುವಕರನ್ನು ತಡೆಯಬೇಕು ಎಂದ ಅವರು ಇದಕ್ಕಾಗಿ ಎಪಿಸಿಆರ್ ರಾಜ್ಯಾದ್ಯಂತ ಕಾನೂನು ಜಾಗೃತಿಯ್ನು ಮೂಡಿಸಲಾಗುವುದು ಎಂದರು.
ಉ.ಕ. ಜಿಲ್ಲೆಯ ಶಿರಸಿ, ಹೊನ್ನಾವರ, ಕುಮಟಾ, ಭಟ್ಕಳ ಹಾಗೂ ಕಾರವಾರ ತಾಲೂಕಿನ ವಿವಿಧ ಮುಸ್ಲಿಮ್ ಮುಖಂಡು ಸಭೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಎಪಿಸಿಆರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೈಕೋರ್ಟ್ ನ್ಯಾಯಾವಾದಿ ನಿಯಾರ್ ಆಹ್ಮದ್, ಆರ್.ಟಿ.ಐ ಕಾರ್ಯಕರ್ತ ಮುಹಮ್ಮದ್ ಶಫಿ, ಉ.ಕ. ಜಿಲ್ಲಾಧ್ಯಕ್ಷ ಮೌಲಾನ ಎಸ್.ಎಂ. ಸೈಯ್ಯದ್ ಝುಬೇರ್, ಜಿಲ್ಲಾ ಸಂಚಾಲಕ ಖಮರುದ್ದೀನ್ ಮಷಾಯಿಖ್, ರಾಜ್ಯ ಸಲಹಾ ಸಮಿತಿ ಸದಸ್ಯ ಇನಾಯತುಲ್ಲಾ ಗವಾಯಿ ಮತ್ತಿತರರು ಉಪಸ್ಥಿತರಿದ್ದರು.







