ಪುತ್ತೂರು: ಪೊಲೀಸರ ವಿರುದ್ಧ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ
ಪ್ರತಿಭಟನಕಾರರೊಂದಿಗೆ ಜಿಲ್ಲಾ ಎಸ್‌ಪಿ ಮಾತುಕತೆ

ಪುತ್ತೂರು, ಡಿ. 26: ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ವಿನಾ ಕಾರಣ ದೌರ್ಜನ್ಯ ನಡೆಸಿ ಕೇಸು ದಾಖಲಿಸುವ ಸಂಪ್ಯ ಗ್ರಾಮಾಂತರ ಠಾಣಾಧಿ ಕಾರಿ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ಚಂದ್ರ, ಕರುಣಾಕರ, ಸುರೇಶ್ ಇವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಆಗ್ರಹಿಸಿದರು.
ಅವರು ಮಂಗಳವಾರ ಪುತ್ತೂರು ಮಿನಿವಿಧಾನ ಸೌಧದ ಮುಂಭಾಗದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಜ.2 ತನಕ ನಡೆಯಲಿರುವ ಪ್ರತಿಭಟನೆ ಯನ್ನು ಉದ್ಘಾಟಿಸಿ, ಮಾತನಾಡಿದರು.
ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ದಂಧೆಗಳು ನಡೆಯುತ್ತಿವೆ. ಗೋ ಸಾಗಾಟ, ಗೋ ಕಳ್ಳತನ, ಅಕ್ರಮ ಮರಳು ಮಾರಾಟ, ಲವ್ ಜಿಹಾದ್ ನಡೆಯುತ್ತಿದೆ. ಆದರೆ ಇಲ್ಲಿನ ಪೊಲೀಸ್ ಅಧಿಕಾರಿ ಇಂತಹ ಅಕ್ರಮ ಚಟುವಟಿಕೆಗಳಿಗೆ ತಡೆ ಹಾಕುವುದನ್ನು ಬಿಟ್ಟು ಅಮಾಯಕ ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದಾರೆ. ಹಿಂದೂಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಹಲ್ಲೆ ನಡೆಸುತ್ತಾರೆ. ವಿನಾಕಾರಣ ಕೇಸು ದಾಖಲು ಮಾಡುತ್ತಿದ್ದಾರೆ. ಎಸ್‌ಐ ಖಾದರ್ ಹಾಗೂ ಅವರ ಚೇಲಾ ಗಳು ಸಂಪ್ಯ ಠಾಣೆಯಲ್ಲಿ ನಡೆಸುವ ದೌರ್ಜನ್ಯಗಳು ಸಮಾಜವನ್ನು ಭಯಭೀತ ಗೊಳಿಸುತ್ತಿದೆ. ಇದನ್ನು ಹಿಂದೂ ಸಮಾಜ ಯಾವತ್ತಿಗೂ ಸಹಿಸುವುದಿಲ್ಲ. ಎಲ್ಲಾ ಸಮುದಾಯವನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆ ಇಲ್ಲಿ ಹಿಂದೂಗಳಿಗೆ ಅನ್ಯಾಯ, ಅಪಮಾನ ಮಾಡುತ್ತಿದೆ. ಇದರ ವಿರುದ್ಧ ಇಂದು ಆರಂಭಗೊಂಡಿರುವ ಈ ಧರಣಿ ಪ್ರತಿಭಟನೆ ಜನವರಿ 2 ತನಕ ನಡೆಯಲಿದೆ. ನ್ಯಾಯಯುತ ಹೋರಾಟದ ಮೂಲಕ ನಾವು ನ್ಯಾಯ ಕೇಳುತ್ತಿದ್ದೇವೆ. ತಕ್ಷಣ ಈ ಪೊಲೀಸ್ ಅಧಿಕಾರಿ ಹಾಗೂ ಇವರ ಚೇಲಾಗಳನ್ನು ಅಮಾನತುಗೊಳಿಸಬೇಕು ಎಂದು ರಾಧಾಕೃಷ್ಣ ಅಡ್ಯಂತಾಯ ಒತ್ತಾಯಿಸಿದರು.
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಎಸ್ಸೈ ಖಾದರ್ ಹಾಗೂ ಅವರ ಚೇಲಾ ಗಳು ನಡೆಸುತ್ತಿದ್ದಾರೆ. ಆದರೆ ಇವರ ಯಾವುದೇ ದೌರ್ಜನ್ಯಕ್ಕೆ ಬೆದರಿ ಕುಳಿತುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಪ್ರತ್ಯುತ್ತರವಾಗಿ ನಮ್ಮ ಹೋರಾಟ ನಡೆಸುತ್ತೇವೆ. ಉತ್ತರವನ್ನೂ ಕೊಡುತ್ತೇವೆ. ನಮ್ಮ ಸಹನೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ನಿಮ್ಮ ದೌರ್ಜನ್ಯಕ್ಕೆ ನಮ್ಮದು ನ್ಯಾಯ ಸಮ್ಮತವಾದ ಹೋರಾಟದ ಮೂಲಕ ಉತ್ತರ ನೀಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಟಿ, ಜಿಲ್ಲಾ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಕಡಬ, ಬಿಜೆಪಿ ಮಂಡಲ ಪುತ್ತೂರು ನಗರಾಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶಿವರಂಜನ್, ಬಿಜೆಪಿ ಮುಖಂಡ ಸಹಜ್ ರೈ ಬಳಜ್ಜ, ಹಿಂದು ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಚಿನ್ಮಯ ರೈ, ಹಿಂದೂ ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ಹಿಂದೂ ಸಂಘಟನೆಗಳ ಪ್ರಮುಖರಾದ ಸಂದೀಪ್ ಪಂಪುವೆಲ್, ಶ್ರೀಧರ್ ತೆಂಕಿಲ, ರಾಕೇಶ್ ನಾಕ್, ಜಯಂತ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿದರು.
ಪ್ರತಿಭಟನಕಾರರೊಂದಿಗೆ ಜಿಲ್ಲಾ ಎಸ್‌ಪಿ ಮಾತುಕತೆ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿಂದೂ ಹಿತರಕ್ಷಣಾ ಸಮಿತಿಯೊಂದಿಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮಂಗಳವಾರ ಸಂಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಸಿದರು.
ಹಿಂದೂ ಹಿತರಕ್ಷಣಾ ಸಮಿತಿಯವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ಚಂದ್ರ, ಕರುಣಾಕರ ಮತ್ತು ರುಕ್ಮಯ ಅವರಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ಎಸ್‌ಪಿ ಅವರಲ್ಲಿ ಆರೋಪಿಸಿದರು. ಈ ಸಂದರ್ಭದಲ್ಲಿ ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ಅವರು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು.
ಪೊಲೀಸ್ ಇಲಾಖೆಯ ಪುತ್ತೂರು ಪ್ರಭಾರ ಎಎಸ್‌ಪಿ ಅರುಣ್ ಕುಮಾರ್ ಮತ್ತು ನಗರ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಮಹೇಶ್ ಪ್ರಸಾದ್, ಹಿಂದೂ ಹಿತರಕ್ಷಣಾ ಸಮಿತಿಯ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ತಾಲೂಕು ಪಂಚಾಯತ್ ಸದಸ್ಯರಾದ ಎಸ್. ಶಿವರಂಜನ್, ಹರೀಶ್ ಬಿಜತ್ರೆ, ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯ ಕೆ. ಜೀವಂಧರ ಜೈನ್, ಮುರಳೀಕೃಷ್ಣ ಹಸಂತ್ತಡ್ಕ, ಗೋಪಾಲಕೃಷ್ಣ ಹೇರಳೆ, ಸಚಿನ್ ರೈ ಪಾಪೆಮಜಲು, ಸಹಜ್ ರೈ ಬಳಜ್ಜ, ರಾಮ್‌ದಾಸ್ ಹಾರಾಡಿ, ಚಂದ್ರಶೇಖರ ರಾವ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.







