ಮಹಾದಾಯಿ ವಿಚಾರದಲ್ಲಿ ಬೆಂಕಿ ಹಚ್ಚುತ್ತಿರುವ ಸಿಎಂ: ಯಡಿಯೂರಪ್ಪ
ಬೆಂಗಳೂರು, ಡಿ.26: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನನಗೆ ಪತ್ರ ಬರೆದಿರುವ ವಿಚಾರವನ್ನು ಮುಂದಿಟ್ಟುಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾದ ಕಾಂಗ್ರೆಸ್ ನಾಯಕರ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ಪ್ರತಿಭಟನಾ ನಿರತ ಮಹಾದಾಯಿ ಹೋರಾಟಗಾರರೊಂದಿಗೆ ನಡೆಸಿದ ಸಂಧಾನ ಮಾತುಕತೆ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕಳಸಾ ಬಂಡೂರಿ ಯೋಜನೆಗೆ ನಾನು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿದೆವು. ಆದರೆ, ಈಗ ನಾವು ಸಮಸ್ಯೆಯನ್ನು ಬಗೆಹರಿಸುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅವರು ಹೇಳಿದರು. ಗೋವಾ, ಮಹಾರಾಷ್ಟ್ರದ ವಿಪಕ್ಷ ನಾಯಕರನ್ನು ಒಪ್ಪಿಸಿ, ಸಂಧಾನ ಮಾತುಕತೆಗೆ ಸಿದ್ದರಾಮಯ್ಯ ಯಾವುದೆ ಪ್ರಯತ್ನ ಮಾಡಿಲ್ಲ. ಡಿ.20ರಂದು ನಾವು ದಿಲ್ಲಿಯಲ್ಲಿ ಚರ್ಚೆ ಮಾಡಿ, ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ಕುಡಿಯುವ ಉದ್ದೇಶಕ್ಕಾಗಿ 7.56 ಟಿಎಂಸಿ ನೀರು ಅಗತ್ಯವಿರುವ ವಿಚಾರಮನದಟ್ಟು ಮಾಡಿಕೊಟ್ಟಿದ್ದೇವೆ. ಅದಕ್ಕೆ ಅವರು ಸಾಕಾರಾತ್ಮಕವಾಗಿ ಸ್ಪಂದಿಸಿ ಉತ್ತರಿಸಿದ್ದಾರೆ ಎಂದು ಅವರು ಹೇಳಿದರು.
ಗೋವಾ ಸಿಎಂ ಮನೋಹರ್ ಪರಿಕ್ಕರ್ ಯಡಿಯೂರಪ್ಪಗೆ ಯಾಕೆ ಪತ್ರ ಬರೆದಿದ್ದಾರೆ ಎಂದು ಕೇಳಿರುವ ಸಿದ್ದರಾಮಯ್ಯ, ಈಗ ಗೋವಾ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಹೇಳಿ ಅಲ್ಲಿ ಹೋರಾಟ ನಡೆಸುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇದಕ್ಕೆ ಪರೋಕ್ಷವಾಗಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಬೆಂಬಲವಿದೆ ಎಂದು ಯಡಿಯೂರಪ್ಪ ದೂರಿದರು.
ಜ.6ರಿಂದ ಗೋವಾದಲ್ಲಿ ಆಂದೋಲನ ಮಾಡುವುದಾಗಿ ಗೋವಾ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಪ್ರಾಮಾಣಿಕರಾಗಿದ್ದರೆ ಅಲ್ಲಿನ ಕಾಂಗ್ರೆಸ್ ಮುಖಂಡರ ಮನವೊಲಿಸಬೇಕು. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯೂ ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
ಆದರೆ, ಈ ವಿಚಾರದಲ್ಲಿ ರಾಜಕೀಯ ಮಾಡಿ, ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಹೋರಾಟಗಾರರ ಬಗ್ಗೆ ನಮಗೆ ಸಹಾನುಭೂತಿ ಇದೆ. ಪ್ರತಿಭಟನೆ ಕೈ ಬಿಡುವಂತೆ ರೈತರಿಗೆ ಮನವಿ ಮಾಡಿದ್ದೇನೆ. ನಮ್ಮ ಕಚೇರಿ ಬದಲು ಮುಖ್ಯಮಂತ್ರಿ ನಿವಾಸದ ಎದುರು ರೈತರಲು ಪ್ರತಿಭಟನೆ ಮಾಡಲಿ ಎಂದು ಅವರು ಹೇಳಿದರು.
ಇದು ಲಕ್ಷಾಂತರ ಜನ ರೈತರ ಸಮಸ್ಯೆ. ಈಗಲೂ ಕಾಲ ಮಿಂಚಿಲ್ಲ. ಗೋವಾ ಮುಖ್ಯಮಂತ್ರಿ ನನಗೆ ಬರೆದಿರುವ ಪತ್ರದ ಆಧಾರದ ಮೇಲೆ ನ್ಯಾಯಾಧೀಕರಣದ ಎದುರು ಮನವಿ ಸಲ್ಲಿಸಿ, ಕುಡಿಯುವ ನೀರಿನ ಬಳಕೆಗೆ ಅವಕಾಶ ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಯಡಿಯೂರಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







