ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಜೈಶ್ ಉಗ್ರನ ಹತ್ಯೆ

ಸಾಂದರ್ಭಿಕ ಚಿತ್ರ
ಶ್ರೀನಗರ, ಡಿ. 26: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಂಬೂರಾ ಪ್ರದೇಶದಲ್ಲಿ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್ ಭಯೋತ್ಪಾದಕ ಸಂಘಟನೆಯ ಉಗ್ರ ನೂರ್ ಮುಹಮ್ಮದ್ ತಾಂತ್ರೆ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾದಲ್ಲಿ ರಾತ್ರಿ ಗುಂಡಿನ ಚಕಮಕಿ ನಡೆಯಿತು. ಬೆಳಗ್ಗೆ 47 ವರ್ಷ ವಯಸ್ಸಿನ ತಾಂತ್ರೆಯ ಮೃತದೇಹ ಪತ್ತೆಯಾಗಿದೆ. ಶ್ರೀನಗರ ವಿಮಾನ ನಿಲ್ದಾಣದ ಸಮೀಪ ಗಡಿ ಭದ್ರತಾ ಪಡೆಯ ಕ್ಯಾಂಪ್ ಮೇಲೆ ಆತ್ಮಹತ್ಯಾ ದಾಳಿ ಸೇರಿದಂತೆ ಈ ವರ್ಷ ಆರಂಭದಲ್ಲಿ ನಡೆದ ಅನೇಕ ಭಯೋತ್ಪಾದಕ ದಾಳಿ ಘಟನೆಗೆ ಸಂಬಂಧಿಸಿ ಈತ ಬೇಕಾದವನಾಗಿದ್ದ.
ತಾಂತ್ರೆಯ ಹತ್ಯೆಯನ್ನು ‘ಗಮನಾರ್ಹ ಪ್ರಗತಿ’ ಎಂದು ವ್ಯಾಖ್ಯಾನಿಸಿರುವ ಪೊಲೀಸರು, ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸೇನಾ ಪಡೆ ಸಂಬೂರಾದಲ್ಲಿ ಗುಂಪು ಮನೆಗಳನ್ನು ಸುತ್ತುವರಿಯಿತು. ಈ ಸಂದರ್ಭ ಗುಂಡಿನ ಚಕಮಕಿ ನಡೆಯಿತು. ಪ್ರತಿದಾಳಿಯಲ್ಲಿ ತಾಂತ್ರೆ ಹತನಾದ ಎಂದಿದ್ದಾರೆ.
ದಿಲ್ಲಿಯಲ್ಲಿ 2003ರಲ್ಲಿ ದಾಖಲಾದ ಪ್ರಕರಣದಲ್ಲಿ ತಾಂತ್ರೆಯನ್ನು ಅಪರಾಧಿ ಎಂದು ಪರಿಗಣಿಸಲಾಗಿತ್ತು. ಆತ ಶ್ರೀನಗರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿ, 2015ರಲ್ಲಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ.
2017 ಜುಲೈಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮೂವರು ಉಗ್ರರು ಹತರಾಗಿದ್ದರು. ಈ ಸಂದರ್ಭ ತಾಂತ್ರೆ ಭೂಗತನಾಗಿದ್ದ. ಅನಂತರ ಆತ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಇಲ್ಲಿ ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ಸಂಘಟಿಸಿದ್ದ.







