ರೂಪಾನಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಶಿವರಾಜ್ ಸಿಂಗ್ ಚೌಹಾಣ್ !

ಭೋಪಾಲ, ಡಿ. 26: ಗುಜರಾತ್‌ನ ಮುಖ್ಯಮಂತ್ರಿಯಾಗಿ ವಿಜಯ ರೂಪಾನಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮಂಗಳವಾರ ನಡೆದಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪಾಲ್ಗೊಂಡಿಲ್ಲ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವರಿಷ್ಠ ಅಮಿತ್ ಶಾ, ಬಿಜೆಪಿ ಆಡಳಿತವಿರುವ 18 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್.ಕೆ. ಅಡ್ವಾಣಿ ಪಾಲ್ಗೊಂಡಿದ್ದಾರೆ. ಆದರೆ, ಶಿವರಾಜ್ ಸಿಂಗ್ ಚೌಹಾಣ್ ಪಾಲ್ಗೊಳ್ಳದೇ ಇರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಚೌಹಾಣ್ ಮಂಗಳವಾರ ಬೆಳಗ್ಗೆ ರಾಜ್ಯ ವಿಮಾನದಲ್ಲಿ ಗುಜರಾತ್‌ಗೆ ತೆರಳಿದ್ದರು. ಆದರೆ, ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳದೇ ಮಧ್ಯಪ್ರದೇಶಕ್ಕೆ ಹಿಂದಿರುಗಿದ್ದಾರೆ.
ಚೌಹಾಣ್ ಪ್ರಮಾಣ ವಚನ ಸ್ವೀಕಾರ ನಡೆಯುವ ಸ್ಥಳದಲ್ಲಿ ಮುಖ್ಯಮಂತ್ರಿ ರೂಪಾನಿ ಹಾಗೂ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್‌ಗೆ ಹೂಗುಚ್ಛ ನೀಡಿ ಅಭಿನಂದಿಸಿದ್ದರು. ಆದರೆ, ಕಾರ್ಯಕ್ರಮ ಆರಂಭವಾಗುವ ಮುನ್ನವೇ ಹಿಂದಿರುಗಿದ್ದಾರೆ. ಅಪರಾಹ್ನ 2 ಗಂಟೆ ಹೊತ್ತಿಗೆ ಗುಣಕ್ಕೆ ಹಿಂದಿರುಗಿರುವ ಚೌಹಾಣ್ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ನಾನು ರೂಪಾನಿ ಹಾಗೂ ನಿತಿನ್ ಪಟೇಲ್ ಅವರನ್ನು ಅಭಿನಂದಿಸಿದ್ದೇನೆ. ಕಾರ್ಯಕ್ರಮ ಆರಂಭವಾಗುವ ಮುನ್ನವೇ ಹಿಂದಿರುಗಲು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಂದ ಅನುಮತಿ ಪಡೆದುಕೊಂಡಿದ್ದೆ ಎಂದಿದ್ದಾರೆ.







