ತ್ರಿವಳಿ ತಲಾಖ್ ಮಸೂದೆ ಡಿ.28ರಂದು ಸಂಸತ್ತಿನಲ್ಲಿ ಮಂಡನೆ

ಹೊಸದಿಲ್ಲಿ,ಡಿ.26: ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವನ್ನಾಗಿಸಲು ಉದ್ದೇಶಿಸಿರುವ ಮಸೂದೆಯು ಡಿ.28ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ.
ಸದನದ ಕಲಾಪ ಪಟ್ಟಿಯಲ್ಲಿ ಸೂಚಿಸಿರುವಂತೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯನ್ನು ಮಂಡಿಸಲಿದ್ದಾರೆ.
ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿಯು ರೂಪಿಸಿರುವ ಮಸೂದೆಯು ಮಾತಿನಲ್ಲಿ, ಬರವಣಿಗೆಯಲ್ಲಿ ಅಥವಾ ಇ-ಮೇಲ್, ಎಸ್‌ಎಂಎಸ್ ಮತ್ತು ವಾಟ್ಸ್ಯಾಪ್ ಹೀಗೆ ಯಾವುದೇ ವಿಧದಲ್ಲಿ ದಿಢೀರ್ ತ್ರಿವಳಿ ತಲಾಖ್ ಅನ್ನು ಅಕ್ರಮವಾಗಿಸಲಿದೆ ಮತ್ತು ಪತಿಗೆ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಿದೆ. ಆತನಿಗೆ ದಂಡವನ್ನೂ ವಿಧಿಸಬಹುದಾಗಿದ್ದು, ದಂಡದ ಪ್ರಮಾಣವನ್ನು ಪ್ರಕರಣದ ವಿಚಾರಣೆ ನಡೆಸುವ ದಂಡಾಧಿಕಾರಿಗಳು ನಿರ್ಧರಿಸುತ್ತಾರೆ.
ಸಂತ್ರಸ್ತ ಮಹಿಳೆ ನ್ಯಾಯಾಲಯದಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ಹಾಗೂ ತನಗೆ ಮತ್ತು ತನ್ನ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಪತಿಯಿಂದ ಜೀವನಾಂಶವನ್ನು ಕೋರಬಹುದಾಗಿದೆ.
ಮಸೂದೆ ಅನಗತ್ಯ,ರಾಜಕೀಯ ಪ್ರೇರಿತ: ಸಿಪಿಎಂ
ತ್ರಿವಳಿ ತಲಾಖ್ ಮಸೂದೆ ಅನಗತ್ಯ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಸಿಪಿಎಂ ಮಂಗಳವಾರ ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿರುವುದರಿಂದ ಇಂತಹ ಕಾನೂನನ್ನು ತರುವ ಅಗತ್ಯವಿಲ್ಲ. ವಿಚ್ಛೇದನವೇ ಆಗದಿದ್ದಾಗ ಈ ಕೃತ್ಯಕ್ಕೆ ಅಪರಾಧ ಸ್ವರೂಪವನ್ನು ನೀಡುವ ಅಗತ್ಯವಾದರೂ ಏನು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಿಪಿಎಂ ಸಂಸದ ಮುಹಮ್ಮದ್ ಸಲೀಂ ಪ್ರಶ್ನಿಸಿದರು.
ತ್ರಿವಳಿ ತಲಾಖ್ ಪದ್ಧತಿಯ ನಿಷೇಧಕ್ಕೆ ಆಗ್ರಹದ ಕುರಿತು ಹೇಳುವುದಾದರೆ ನರೇಂದ್ರ ಮೋದಿಯವರಂತಹ ರಾಜಕಾರಣಿಗಳು ತ್ರಿವಳಿ ತಲಾಖ್ ಶಬ್ದವನ್ನೇ ಕೇಳಿರದಿದ್ದ ಕಾಲದಿಂದಲೂ ನಾವು ಈ ವಿಷಯವನ್ನು ಎತ್ತುತ್ತಲೇ ಇದ್ದೇವೆ. ಆದರೆ ವಿಚ್ಛೇದನವು ಸಿವಿಲ್ ವಿಷಯವಾಗಿದೆ ಮತ್ತು ಅದನ್ನು ಅಪರಾಧವನ್ನಾಗಿಸುವ ಅಗತ್ಯವಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದರು.







