ಅನಂತ್ ಕುಮಾರ್ ಹೆಗಡೆ ಬಂಧಿಸಿ: ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಪ್ರತಿಭಟನೆ
ಮೈಸೂರು, ಡಿ. 26: ಸಂವಿಧಾನವನ್ನು ಬದಲಾಯಿಸಬೇಕೆಂದು ಹೇಳಿಕೆ ನೀಡಿರುವ ಕೇಂದ್ರ ರಾಜ್ಯ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆ ನಡೆಸಲಾಯಿತು.
ಇಡೀ ವಿಶ್ವವೇ ಗೌರವಿಸುವ ಭಾರತ ಸಂವಿಧಾನವನ್ನು ಬದಲಾಯಿಸಬೇಕೆಂದು ಹೇಳಿ ಸಂವಿಧಾನಕ್ಕೆ ಅಪಮಾನ ಮಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕು.
ಸಂವಿಧಾನ ಯಾರಪ್ಪನ ಮನೆ ಆಸ್ತಿಯಲ್ಲ ಅದನ್ನು ಬದಲಿಸಲು ಅನಂತ್ ಕುಮಾರ್ ಹೆಗಡೆಯವರಂತಹ ಸಾವಿರ ಜನ ಬಂದರು ಸಾಧ್ಯವಿಲ್ಲ, ಮೊದಲು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು. ಕೋಮು ಸೌಹಾರ್ದತೆ ಹಾಗೂ ಜನರ ಭಾವನೆಗೆ ಧಕ್ಕೆ ಮಾಡುತ್ತಿರುವ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ, ಮಾಜಿ ಮೇಯರ್ ಪುರುಷೋತ್ತಮ್, ಸೋಮಸುಂದರ್, ರಮೇಶ್, ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.





