ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣ: ಮಾಧ್ಯಮಗಳ ಮೇಲಿನ ತಡೆಯ ವಿರುದ್ಧ ಮೇಲ್ಮನವಿ

ಮುಂಬೈ, ಡಿ.26: ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದಲ್ಲಿ ನಿವೃತ್ತ ಮತ್ತು ಸೇವೆಯಲ್ಲಿರುವ ಆರೋಪಿತ ಪೊಲೀಸ್ ಅಧಿಕಾರಿಗಳ ವಿಚಾರಣೆಯ ವರದಿಯನ್ನು ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ತಡೆ ಹೇರಿರುವ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಕೆಲವು ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಬಾಂಬೆ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ತಮ್ಮ ವಿಚಾರಣೆಯ ವರದಿಯನ್ನು ಪ್ರಕಟಿಸದಂತೆ ಮತ್ತು ಪ್ರಸಾರ ಮಾಡದಂತೆ ಆರೋಪಿತ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸೆಷನ್ಸ್ ನ್ಯಾಯಾಲಯವು ನವೆಂಬರ್ 29ರಂದು ಮಾಧ್ಯಮಗಳ ಮೇಲೆ ತಡೆಯನ್ನು ಹೇರಿ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಕಾನೂನುಬಾಹಿರ ಎಂದು ಕರೆದಿರುವ ರಾಷ್ಟ್ರೀಯ ದೈನಿಕ ಮತ್ತು ಸುದ್ದಿ ವಾಹಿನಿಗಳ ಒಂಬತ್ತು ವರದಿಗಾರರು ಈ ಆದೇಶವನ್ನು ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ತಡೆಯಾಜ್ಞೆಯು ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ಬಹುದೊಡ್ಡ ತಡೆಯಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಪ್ರಕರಣವು ಸಾರ್ವಜನಿಕರ ಹಿತಾಸಕ್ತಿಯನ್ನೂ ಒಳಗೊಂಡಿದೆ ಎಂಬುದನ್ನು ವಿಚಾರಣಾ ನ್ಯಾಯಾಲಯವು ಅರಿತುಕೊಳ್ಳಬೇಕಿತ್ತು ಮತ್ತು ನ್ಯಾಯಾಲಯದೊಳಗೆ ವಿಚಾರಣೆಯ ವೇಳೆ ಏನು ನಡೆಯಿತು ಎಂಬುದನ್ನು ಜನರಿಗೆ ತಿಳಿಸುವ ಹಕ್ಕು ನಮಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಈ ಅರ್ಜಿಯ ವಿಚಾರಣೆಯು 2018ರ ಜನವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಸೊಹ್ರಾಬುದ್ದೀನ್ ಶೇಕ್, ಆತನ ಪತ್ನಿ ಕೌಸರ್ ಬಿ ಮತ್ತು ಗೆಳೆಯ ತುಲಸಿದಾಸ್ ಪ್ರಜಾಪತಿಯನ್ನು 2005ರ ನವೆಂಬರ್‌ನಲ್ಲಿ ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ ಆರೋಪದಲ್ಲಿ 23 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.







