ಸ್ವಾಧೀನವಲ್ಲದ ಭೂಮಿಯಲ್ಲಿ ರಸ್ತೆ ನಿರ್ಮಾಣ: ಹಲ್ಲೇಗೆರೆ ಗ್ರಾಮಸ್ಥರ ಆಮರಣ ಉಪವಾಸ ಸತ್ಯಾಗ್ರಹ

ಮಂಡ್ಯ, ಡಿ.26: ರಸ್ತೆ ಅಭಿವೃದ್ಧಿ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿ ಹೊರತುಪಡಿಸಿ ಸ್ವಾಧೀನವಲ್ಲದ ಜಮೀನಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ತಾಲೂಕಿನ ಹಲ್ಲೇಗೆರೆ ಗ್ರಾಮಸ್ಥರು ಮತ್ತು ರೈತಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಆಮರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಗ್ರಾಮದ ಮಾರ್ಗದ ರಸ್ತೆ ರಸ್ತೆ ಅಭಿವೃದ್ಧಿಪಡಿಸುತ್ತಿರುವ ಕೆಶಿಪ್ ಸಂಸ್ಥೆಯು ಸ್ವಾಧೀನ ಆಗದಿರುವ ಸರ್ವೆ ನಂ.4 ಮತ್ತು 5ರಲ್ಲಿ ರಸ್ತೆ ಅಭಿವೃದ್ಧಿಪಡಿಸುತ್ತಿದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ರಸ್ತೆಗೆ ಭೂಸ್ವಾಧೀನವಾಗಿರುವ 850 ಮೀಟರ್ ಭೂಮಿಯಲ್ಲಿ 50 ಮೀಟರ್ ಮಾತ್ರ ಪ್ರಭಾವಿಗಳು ಕಟ್ಟಡಗಳನ್ನು ಕಟ್ಟಿಕೊಂಡಿದ್ದು, ಉಳಿದ 800 ಮೀಟರ್ ಜಾಗ ಖಾಲಿ ಇದೆ. ಆದರೂ, ಈ ಖಾಲಿ ಜಾಗದಲ್ಲಿ ಕಾಮಗಾರಿ ನಡೆಸದೆ ಭೂಸ್ವಾಧೀನಕ್ಕೆ ಒಳಪಡದ ಭೂಮಿಯಲ್ಲಿ ರಸ್ತೆ ಮಾಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದಲ್ಲದೆ, ಗ್ರಾಮದ ಕೆರೆಯ ಮೇಲೆ ಬ್ರಿಡ್ಜ್ ಮಾಡಿ ರಸ್ತೆ ಮಾಡದೇ ತೀವ್ರ ರೀತಿಯ ತಿರುವುಗಳು ಇರುವ ಹಳೇ ರಸ್ತೆಯಲ್ಲಿ ಹೆದ್ದಾರಿ ಮಾಡಲು ಹೊರಟಿದ್ದಾರೆ. ಇದರಿಂದಾಗಿ ಅಪಘಾತ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ತಕ್ಷಣ ಜಿಲ್ಲಾಡಳಿತ ನಿಗಪಡಿಸಿರುವ ನಕಾಶೆ ರಸ್ತೆ ಹಾಗೂ ಸರ್ವೆ ನಂ.8 ಮತ್ತು 9ರ ಭೂಸ್ವಾಧೀನ ಭೂಮಿಯನ್ನು ಸೇರಿಸಿಕೊಂಡು ರಸ್ತೆ ನಿರ್ಮಿಸುವಂತೆ ಅವರು ಒತ್ತಾಯಿಸಿದ್ದಾರೆ.
ರೈತಸಂಘದ ಮುಖಂಡರಾದ ಹಲ್ಲೇಗೆರೆ ಶಿವರಾಮು, ಶಂಭೂನಹಳ್ಳಿ ಸುರೇಶ್, ಲತಾ ಶಂಕರ್, ಬಿ.ಬೊಮ್ಮೇಗೌಡ, ಜವರೇಗೌಡ, ಬಿ.ವಿ.ತಿಮ್ಮಯ್ಯ, ಚಂದ್ರು, ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.







