ಕೇಂದ್ರ - ಗೋವಾದಿಂದ ಕರ್ನಾಟಕ ರಾಜ್ಯದ ರೈತರಿಗೆ ದ್ರೋಹ: ಸಿಪಿಐಎಂಎಲ್ ಆರೋಪ
ಚಿಕ್ಕಮಗಳೂರು, ಡಿ.26: ಮಹಾದಾಯಿ ವಿಚಾರದಲ್ಲಿ ಕೇಂದ್ರ ಹಾಗೂ ಗೋವಾ ಸರಕಾರಗಳು ಕರ್ನಾಟಕ ರಾಜ್ಯದ ರೈತರಿಗೆ ದ್ರೋಹ ಎಸಗಿವೆ ಎಂದು ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಿ.ಜೆ.ಜಗನ್ನಾಥ್ ಆರೋಪಿಸಿದ್ದಾರೆ.
ಅವರು ಮಂಗಳವಾರ ಈ ಕುರಿತು ಹೇಳಿಕೆ ನಿಡಿದ್ದು, ಗೋವಾ ಮುಖ್ಯಮಂತ್ರಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯುವ ಬದಲು ಬಿಜೆಪಿಯ ಮುಖಂಡರಿಗೆ ಪತ್ರ ಬರೆಯುವ ಮೂಲಕ ಸಂಧಾನ ಮಾರ್ಗವನ್ನು ತಿರಸ್ಕರಿಸಿದ್ದಾರೆ. ಇದರ ಹಿಂದೆ ಕೇಂದ್ರ ಸರಕಾರದ ರಾಜ್ಯ ಬಿಜೆಪಿಯ ಚುನಾವಣಾ ಲಾಬಿ ಅಡಗಿದೆ. ಇದು ಕರ್ನಾಟಕದ ಬಾಧಿತ ರೈತರ ಜೀವನಕ್ಕೆ ಕೊಟ್ಟ ಕೊಡಲಿ ಪೆಟ್ಟಾಗಿದೆ ಎಂದರು.
ಮಹಾದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಅಂದೇ ಸರಣಿ ಮಾತುಕತೆಯ ಮೂಲಕ ಮಹಾದಾಯಿ ವಿವಾದಕ್ಕೆ ತೆರೆ ಎಳೆದಿದ್ದರೆ ಕರ್ನಾಟಕ ರಾಜ್ಯದ ಪಾಲಿನ 7.56 ಟಿಎಂಸಿ ನೀರನ್ನು ಈಗಾಗಲೇ ಬಳಸಿಕೊಂಡು ಬರಪೀಡಿತ ಪ್ರದೇಶದ ರೈತರ ಬದುಕಿಗೆ ಆಸರೆಯಾಗುತ್ತಿತ್ತು. ಸಂಧಾನ ಮಾರ್ಗ ಬಿಟ್ಟು ನ್ಯಾಯ ಮಂಡಳಿ ರಚಿಸಿ ಕೇಂದ್ರ ಕಾಂಗ್ರೆಸ್ ಸರಕಾರ ಕೈತೊಳೆದುಕೊಂಡಿತು ಎಂದಿದ್ದಾರೆ.
ತಾವು ಅಧಿಕಾರದಲ್ಲಿದ್ದಾಗ ಮಹಾದಾಯಿ ಸಮಸ್ಯೆಗೆ ಪರಿಹಾರ ಹುಡುಕಲು ಕನಿಷ್ಠ ಪರಿಶ್ರಮ ಹಾಕದ ಬಿಜೆಪಿ ಇಂದು ಮುಂದಿನ ವಿಧಾನಸಭಾ ಚುನಾವಣೆವರೆಗೆ ಈ ಗಂಭೀರ ಸಮಸ್ಯೆಯನ್ನು ಜೀವಂತವಾಗಿಟ್ಟು ಅಧಿಕಾರಕ್ಕೆ ಬರುವ ದುರ್ಮಾರ್ಗದಲ್ಲಿ ಹೊರಟಿದೆ. ರೈತರ, ಜನಸಾಮಾನ್ಯರ ದಶಕದ ಬೇಡಿಕೆಯನ್ನು ರಾಜಕೀಯ ದಾಳವಾಗಿಸುವ ಬಿಜೆಪಿಗೆ ಕರ್ನಾಟಕ ಜನ ತಕ್ಕ ಪಾಠ ಕಲಿಸಬೇಕು ಎಂದರು.
ಅಂತಾರಾಜ್ಯ ಜಲವಿವಾದ, ಗಡಿ ವಿವಾದ ಸೇರಿದಂತೆ ಸಾಮುದಾಯಿಕ ಸಮಸ್ಯೆಗಳನ್ನು ಸಂಧಾನ ಮಾರ್ಗದಲ್ಲಿ ಬಗೆಹರಿಸಿಕೊಳ್ಳಲು ಸಂವಿಧಾನ ಅವಕಾಶ ಕಲ್ಪಿಸಿದೆ. ಪ್ರಕರಣ ನ್ಯಾಯಾಲಯ ಅಥವಾ ನ್ಯಾಯಮಂಡಳಿಯ ವಿಚಾರಣೆ ಹಂತದಲ್ಲಿದ್ದರೂ ಪ್ರಕರಣಕ್ಕೆ ಸಂಬಂಧಿಸಿದವರು ಮಾತುಕತೆಯ ಮೂಲಕ ಏಕಾಭಿಪ್ರಾಯಕ್ಕೆ ನ್ಯಾಯಾಲಯಕ್ಕೆ ಪತ್ರ ಬರೆಯಬಹುದಾಗಿದೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ಮುಂಬರುವ ಚುನಾವಣೆಯಲ್ಲಿ ಪರ್ಯಾಯ ಹುಡುಕಲು ಜನರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.







