ಇಬ್ಬರು ಸಹೋದರಿಯರ ಮೃತದೇಹ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ನೋಯ್ಡಾ, ಡಿ. 26: ನೋಯ್ಡಾ ಸೆಕ್ಟರ್ 49ರ ಬರೌಲ ಗ್ರಾಮದಲ್ಲಿ ಮರವೊಂದರಲ್ಲಿ ಇಬ್ಬರು ಸಹೋದರಿಯರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯರನ್ನು ಹೆಣ್ಣು ಮಕ್ಕಳನ್ನು ಲಕ್ಷ್ಮೀ (18) ಹಾಗೂ ನಿಶಾ (14) ಎಂದು ಗುರುತಿಸಲಾಗಿದೆ. ನಿಶಾ ಶಾಲೆಗೆ ಹೋಗುತ್ತಿದ್ದಳು. ಲಕ್ಷ್ಮೀ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ನಗರ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇವರ ತಂದೆ ಬುಲಂದಶಹರ್‌ನಿಂದ ಇಲ್ಲಿಗೆ ಆಗಮಿಸಿದ್ದರು ಹಾಗೂ ನೋಯ್ಡ ಸೆಕ್ಟರ್ 49ರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಮಂಗಳವಾರ ಬೆಳಗ್ಗೆ ಈ ಸಹೋದರಿಯರ ಮೃತದೇಹ ಪತ್ತೆಯಾದ ಬಗ್ಗೆ ಪೊಲೀಸರು ಮಾಹಿತಿ ಸ್ವೀಕರಿಸಿದ್ದರು. ಅನಂತರ ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಕೆಳಕ್ಕೆ ಇಳಿಸಲಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈ ಘಟನೆ ನಡೆಯುವಾಗ ಹೆಣ್ಣು ಮಕ್ಕಳ ಕುಟುಂಬದ ಮನೆ ಬಾಗಿಲ ಚಿಲಕವನ್ನು ಹೊರಗಿನಿಂದ ಹಾಕಲಾಗಿದೆ. ಪೊಲೀಸರು ಬಂದ ಬಳಿಕ ಬಾಗಿಲ ಚಿಲಕ ತೆಗೆಯಲಾಯಿತು ಅನಂತರ ಹೆಣ್ಣು ಮಕ್ಕಳ ಮೃತದೇಹವನ್ನು ಮರದಿಂದ ಕೆಳಗಿಳಿಸಲಾಯಿತು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸರು ಹೆಣ್ಣು ಮಕ್ಕಳ ತಂದೆ ಕುಲಭೂಷಣ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ಈ ಸಂದರ್ಭ ಕುಲಭೂಷಣ್, ತನ್ನ ಹಿರಿಯ ಪುತ್ರಿಗೆ ಓರ್ವ ಯುವಕನೊಂದಿಗೆ ಪ್ರೇಮವಿತ್ತು. 10 ದಿನಗಳ ಹಿಂದೆ ಆಕೆ ಆತನೊಂದಿಗೆ ಓಡಿ ಹೋಗಿದ್ದಳು. ಅನಂತರ ಕೆಲವು ದಿನಗಳ ನಂತರ ಹಿಂದಿರುಗಿದ್ದರು ಎಂದು ತಿಳಿಸಿದ್ದಾರೆ. ಕುಲಭೂಷಣ್ ಪತ್ನಿ, ಇದು ಆತ್ಮಹತ್ಯೆಯಲ್ಲ, ಸೋದರಳಿಯ ಹಾಗೂ ಮತ್ತೊಬ್ಬ ನನ್ನಿಬ್ಬರು ಹೆಣ್ಣು ಮಕ್ಕಳನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣವನ್ನು ಹತ್ಯೆ, ಮರ್ಯಾದ ಹತ್ಯೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.







