ಹಿಂಸೆಗಳಿಗೆ ಕಡಿವಾಣ ಹಾಕಬೇಕಾಗಿದೆ: ದಲಾಯಿ ಲಾಮಾ ಅಭಿಪ್ರಾಯ
ಸಾರ್ವಜನಿಕ ಸಭೆ

ತುಮಕೂರು, ಡಿ.26: ಧರ್ಮ, ಜಾತಿ ಇನ್ಯಾವುದೇ ಹೆಸರಿನಲ್ಲಿ ನಡೆಯುವ ಪ್ರತಿಯೊಂದು ಹಿಂಸೆಯೂ ಅಪರಾಧವಾಗಿದೆ. ಆದ್ದರಿಂದ ಹಿಂಸೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ದಲಾಯಿ ಲಾಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮಕೂರು ವಿವಿಯ ಡಾ.ಶ್ರೀಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ತುಮಕೂರು ವಿವಿ ಹಾಗು ಬೈಲುಕುಪ್ಪೆಯ ಸಿರಾ ಜೇ ಮೊನಾಸ್ಟಿಕ್ ವಿವಿ ಜಂಟಿಯಾಗಿ ಆಯೋಜಿಸಿದ್ದ ಆಧುನಿಕ ಯುಗಕ್ಕಾಗಿ ಸಾರ್ವತ್ರಿಕ ನೈತಿಕತೆಯ ಪ್ರಸ್ತುತತೆ ಎಂಬ ವಿಷಯ ಕುರಿತ ಸಾರ್ವಜನಿಕ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಅನಾದಿ ಕಾಲದಿಂದಲೂ ಕಾಪಾಡಿಕೊಂಡು ಬಂದಿರುವ ಸೆಕ್ಯುಲರ್ ವಾದವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.
ಜಾತಿ, ಧರ್ಮದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆಯಿಂದ ನಡೆಯುವ ಹಿಂಸೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಜನತೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಭಾರತದ ರಾಜಕಾರಣಿಗಳು ಸರಿಯಾಗಿ ಜಾತ್ಯಾತೀತ ತತ್ವವನ್ನು ಅರ್ಥ ಮಾಡಿಕೊಳ್ಳದಿರುವುದೇ ಹಿಂಸೆಗೆ ಕಾರಣ. ಇದನ್ನು ಹೋಗಲಾಡಿಸಲು ಶಿಕ್ಷಣವೊಂದೇ ದಾರಿ ಎಂದು ದಲಾಯಿ ಲಾಮಾ ತಿಳಿಸಿದರು.
ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ.ಜಯಶೀಲ, ಬೈಲುಕಪ್ಪೆಯ ಸಿರಾ ಜೇ ಮೋನಾಸ್ಟಿಕ್ ವಿವಿಯ ಕುಲಪತಿ ತೇನ್ಜೀನ್ ಚೋಸೇಂಗ್ ರಿನ್‌ಪೋಂಚೆ, ಸಿರಾ ಜೆ ಮೋನಾಸ್ಟಿಕ್ ವಿವಿಯ ಮುಖ್ಯಕಾರ್ಯದರ್ಶಿ ಗಿಷೇ ತುಪ್‌ಟನ್ ವಾಂಗ್‌ಚುಕ್ ಮತ್ತು ತುಮಕೂರು ವಿವಿಯ ಕುಲಸಚಿವ ಪ್ರೊ.ಬಿ.ಎಸ್ ಗುಂಜಾಳ್, ತುಮಕೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.







