ಉಳುವವನಿಗೆ ದಾಖಲಾತಿ ಪತ್ರ ವಿತರಣೆ: ಶಾಸಕ ನಾರಾಯಣ ಗೌಡ
ಅಕ್ರಮ-ಸಕ್ರಮ ಭೂ ಮಂಜೂರಾತಿ ಸಭೆ

ಕೆ.ಆರ್.ಪೇಟೆ, ಡಿ.26: ರಾಜ್ಯದ ಉಚ್ಛ ನ್ಯಾಯಾಲಯದ ನಿರ್ದೇಶನ ಹಾಗೂ ರಾಜ್ಯ ಸರಕಾರದ ಸೂಚನೆಯಂತೆ ಅಕ್ರಮಸಕ್ರಮ ಬಗರ್‌ಹುಕುಂ ಸಾಗುವಳಿದಾರರ ಬಾಕಿಯಿರುವ 6 ಸಾವಿರ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ ಕಾನೂನುಬದ್ಧವಾಗಿ ಉಳುತ್ತಿರುವ ರೈತನಿಗೆ ಮಂಜೂರು ಮಾಡಿ ಭೂದಾಖಲಾತಿಗಳನ್ನು ವಿತರಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಅವರು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಅಕ್ರಮ-ಸಕ್ರಮ ಭೂ ಮಂಜೂರಾತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮೂನೆ 50 ಮತ್ತು 53ರಲ್ಲಿ ಭೂಮಿಯ ಮಂಜೂರಾತಿಗಾಗಿ ಅರ್ಜಿಯನ್ನು ಸಲ್ಲಿಸಿರುವ 6 ಸಾವಿರಕ್ಕೂ ಹೆಚ್ಚಿನ ರೈತ ಫಲಾನುಭವಿಗಳು ಭೂಮಿಯ ಒಡೆತನಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ನಿಜವಾದ ಬೇಸಾಯ ಮಾಡುತ್ತಿರುವ ರೈತರಿಗೆ, ಕೃಷಿ ಭೂಮಿಯೇ ಇಲ್ಲದ ಬಡಜನರಿಗೆ ಆದ್ಯತೆಯ ಮೇರೆಗೆ ಭೂಮಿಯನ್ನು ವಿತರಣೆ ಮಾಡಲು ವಾರಕ್ಕೆ ಎರಡು ಬಾರಿ ಸಭೆ ನಡೆಸಿ ಚರ್ಚೆ ಮಾಡಿ ಭೂ ದಾಖಲಾತಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ಭೂಮಿಯ ಮಂಜೂರಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಅಕ್ರಮ-ಸಕ್ರಮ ಭೂಮಿ ಮಂಜೂರಾತಿ ಬಗರ್‌ಹುಕುಂ ಸಮಿತಿಯಲ್ಲಿ ನನ್ನೊಂದಿಗೆ ಸಮಿತಿಯ ಸದಸ್ಯರು ಕೆಲಸ ಮಾಡುತ್ತಿದ್ದು, ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಆರ್.ರತ್ನಾ ಸಮಿತಿಯ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ. 2018ರ ನೂತನ ವರ್ಷದ ಜನವರಿ ತಿಂಗಳ ಅಂತ್ಯದ ವೇಳೆಗೆ ಅರ್ಹ ಫಲಾನುಭವಿಗಳಿಗೆ ಭೂಮಿಯ ಮಂಜೂರಾತಿ ಪತ್ರವನ್ನು ವಿತರಿಸುತ್ತೇವೆ ಎಂದು ಶಾಸಕ ನಾರಾಯಣಗೌಡ ತಿಳಿಸಿದ್ದಾರೆ.
ಈ ಸಂದರ್ಭ ತಹಶೀಲ್ದಾರ್ ಕೆ.ರತ್ನಾ, ಸಮಿತಿಯ ಸದಸ್ಯರಾದ ಗಂಜಿಗೆರೆ ಶಿವಣ್ಣ, ಮಲ್ಕೋನಹಳ್ಳಿ ಗಂಗಾಧರ್, ಉಪತಹಶೀಲ್ದಾರ್ ಲಕ್ಷ್ಮೀಕಾಂತ್, ಕಸಬಾ, ಸಂತೇಬಾಚಹಳ್ಳಿ, ಅಕ್ಕಿಹೆಬ್ಬಾಳು, ಕಿಕ್ಕೇರಿ ಶೀಳನೆರೆ, ಬೂಕನಕೆರೆ ಹೋಬಳಿಗಳ ರಾಜಸ್ವ ನಿರೀಕ್ಷಕ ಮತ್ತು ವಿಷಯ ನಿರ್ವಾಹಕರು ಶ್ರೀವತ್ಸಾ ಮತ್ತು ಅನಿತಾ ಉಪಸ್ಥಿತರಿದ್ದರು.
ಹೇಮಗಿರಿ ಜಾತ್ರೆ
ತಾಲೂಕಿನ ಇತಿಹಾಸ ಪ್ರಸಿದ್ಧವಾದ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯವರ ದನಗಳ ಜಾತ್ರೆಯು ಜನವರಿ ತಿಂಗಳಲ್ಲಿ ಆರಂಭವಾಗುತ್ತಿದ್ದು 24ರಂದು ರಥೋತ್ಸವವು ನಡೆಯುವುದರಿಂದ ಜಾತ್ರೆಗೆ ರಾಸುಗಳನ್ನು ಕರೆ ತರುವವರು ಜನವರಿ 20ರ ನಂತರ ತರಬೇಕು. ಜಾತ್ರೆಗೆ ಆಗಮಿಸುವ ರಾಸುಗಳು ಮತ್ತು ರಾಸುಗಳ ಮಾಲಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಜನವರಿ 2 ರಂದು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ. ಆಸಕ್ತರು ಹಾಗೂ ಹೇಮಗಿರಿಯ ಸುತ್ತಮುತ್ತಲಿನ ಗ್ರಾಮಗಳ ಜನರು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಶಾಸಕ ನಾರಾಯಣಗೌಡ ಆಗ್ರಹಿಸಿದ್ದಾರೆ.
ಗೋಮಾಳ ಉಳುತ್ತಿರುವವರಿಗೂ ಭೂಮಿ ಮಂಜೂರು
ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶ ಬಡ ರೈತರು ಉಳುಮೆ ಮಾಡುತ್ತಿರುವ ಗೋಮಾಳವನ್ನು ಕೂಡ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಸರಕಾರಿ ಗುಂಡುತೋಪು, ಕೆರೆ-ಕಟ್ಟೆಯ ಆವರಣ, ಕುಳುವಾಡಿಕೆ ಭೂಮಿ ಪ್ರಕರಣವನ್ನು ಹೊರತುಪಡಿಸಿ ಉಳಿದ ಪ್ರಕರಣವನ್ನು ಪಾರದರ್ಶಕವಾಗಿ ಇತ್ಯರ್ಥಪಡಿಸುತ್ತಿದ್ದೇವೆ. ರೈತರು ಅಕ್ರಮ-ಸಕ್ರಮ ಭೂಮಿಯ ಮಂಜೂರಾತಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯವರ್ತಿಗಳನ್ನಾಗಲೀ, ದಳ್ಳಾಳಿಗಳನ್ನಾಗಲೀ ಆಶ್ರಯಿಸಿಕೊಂಡು ಹಣದ ವ್ಯವಹಾರವನ್ನು ಮಾಡಬಾರದು, ಸಮಿತಿಯು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದೆ. ಹಣಕಾಸಿನ ವ್ಯವಹಾರ ಕಂಡು ಬಂದರೆ ಅಂತಹ ಪ್ರಕರಣಗಳನ್ನು ರದ್ದುಗೊಳಿಸಲಾಗುವುದು ಎಂದು ಶಾಸಕ ನಾರಾಯಣಗೌಡ ಎಚ್ಚರಿಸಿದ್ದಾರೆ.







