7.56 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಮುಹಮ್ಮದ್ ನಝೀರ್
ಸ್ಮಾರ್ಟ್ ರೋಡ್ ಆಗಲಿದೆ ಮಂಗಳೂರಿನ ಕ್ಲಾಕ್ ಟವರ್-ಎಬಿ ಶೆಟ್ಟಿ ಸರ್ಕಲ್ ರಸ್ತೆ

ಸಾಂದರ್ಭಿಕ ಚಿತ್ರ
ಮಂಗಳೂರು, ಡಿ. 27: ನಗರ ಸ್ಮಾರ್ಟ್ ಸಿಟಿ ಆಗುತ್ತಿರುವಂತೆಯೇ ನಗರದ ಪ್ರಮುಖ ರಸ್ತೆಯೂ ಸ್ಮಾರ್ಟ್ ರೋಡ್ ಆಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕ್ಲಾಕ್ ಟವರ್ - ಎ.ಬಿ.ಶೆಟ್ಟಿ ಸರ್ಕಲ್ ರಸ್ತೆ ಸ್ಮಾರ್ಟ್ ರೋಡ್ ಆಗಿ ಅಭಿವೃದ್ಧಿಗೆ ರೂಪುರೇಷೆ ಸಿದ್ಧಗೊಂಡಿದೆ ಎಂದು ನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದ್ದಾರೆ.
ಮನಪಾ ಕಚೇರಿಯಲ್ಲಿ ಇಂದು ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಅವರು, 7.56 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ಸ್ಮಾರ್ಟ್ ರೋಡ್ ಆಗಿ ಅಭಿವೃದ್ಧಿಗೊಳ್ಳಲಿದೆ ಎಂದರು. ಇದೇ ವೇಳೆ ಹಳೆ ಕ್ಲಾಕ್ ಟವರ್ ಇದ್ದ ಜಾಗದಲ್ಲೇ 90 ಲಕ್ಷ ರೂ. ವೆಚ್ಚದಲ್ಲಿ ಹೊಸ ಕ್ಲಾಕ್ ಟವರ್ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು.
‘ಈಗಾಗಲೇ 65 ಕಾಮಗಾರಿಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಸ್ತಾವನೆಗೊಂಡು ಮಂಜೂರಾಗಿದೆ. ಈ ಪೈಕಿ 4 ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪಂಪ್ವೆಲ್ನಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣವನ್ನು ಹೊಸದಾಗಿ ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.
ಕ್ಲಾಕ್ ಟವರ್-ಎ.ಬಿ.ಶೆಟ್ಟಿ ಸರ್ಕಲ್ ರಸ್ತೆಯ ರಸ್ತೆ ವಿಭಾಜಕವನ್ನು ಮರು ವಿನ್ಯಾಸಗೊಳಿಸಲಾಗುವುದು. ಮೈದಾನದ ಬದಿಯಲ್ಲಿ ಫುಟ್ಪಾತ್, ಒಳಚರಂಡಿ ಮತ್ತು ಕೇಬಲ್ ಅಳವಡಿಕೆಗೆ ಪ್ರತ್ಯೇಕ ವ್ಯವಸ್ಥೆ ಅಳವಡಿಸಲಾಗುವುದು. ರಸ್ತೆ ಬದಿಯಲ್ಲಿ ಪಾರ್ಕ್ ಮಾದರಿ ಅಂದಗೊಳಿಸಿ ಆಸನ ವ್ಯವಸ್ಥೆ ಕಲ್ಪಿಸಲಾಗುವುದು.
ವೈಫೈ, ಸಿಸಿ ಕ್ಯಾಮರಾ, ವಾಯು ಗುಣಮಟ್ಟ ಪ್ರದರ್ಶಿಸುವ ಫಲಕ ವ್ಯವಸ್ಥೆ ಸ್ಮಾರ್ಟ್ ಪೋಲ್ ಅಳವಡಿಕೆಯಾಗಲಿದೆ. ರಸ್ತೆಯ ಇನ್ನೊಂದು ಬದಿಯಲ್ಲಿರುವ ಈಗಿನ 9 ಬಸ್ ತಂಗುದಾಣಗಳನ್ನು ಸ್ಥಳಾಂತರಿಸಿ, ಹೊಸದಾಗಿ ಸ್ಮಾರ್ಟ್ ಬಸ್ ಶೆಲ್ಟರ್ ಹಾಗೂ ಇ ಶೌಚಾಲಯ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ನಗರದ ವಿವಿಧೆಡೆ 4.8 ಕೋಟಿ ರೂ. ವೆಚ್ಚದಲ್ಲಿ ಎ, ಬಿ ಹಾಗೂ ಸಿ ಮಾದರಿಯ 22 ಸ್ಮಾರ್ಟ್ ಬಸ್ ತಂಗುದಾಣ ನಿರ್ಮಾಣವಾಗಲಿದೆ. 7.5 ಮೀಟರ್ ಉದ್ದ ಹಾಗೂ ಇ ಶೌಚಾಲಯ ಸಹಿತ (ಎ ಮಾದರಿ), 7.5 ಮೀಟರ್ ಉದ್ದ ( ಬಿ ಮಾದರಿ), 6 ಮೀ. ಉದ್ದ ( ಸಿ ಮಾದರಿ)ದ ಬಸ್ ತಂಗುದಾಣಗಳಾಗಿವೆ. ಬಂದರು ಪ್ರದೇಶ ನೆಲ್ಲಿಕಾಯಿ ರಸ್ತೆಯಲ್ಲಿ 4.95 ಕೋಟಿ ರೂ.ವೆಚ್ಚದಲ್ಲಿ ಒಳ ಚರಂಡಿ ವ್ಯವಸ್ಥೆಯ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ. ಮುಂದಿನ ಹಂತದಲ್ಲಿ ಈ ಪ್ರದೇಶದ ರಸ್ತೆಗಳಿಗೆ 32.5 ಕೋಟಿ ರೂ.ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ ಎಂದು ಅವರು ವಿವರ ನೀಡಿದರು.
75.28 ಕೋಟಿ ರೂ,ವೆಚ್ಚದ ಕಮಾಂಡ್ ಕಂಟ್ರೋಲ್ ಸೆಂಟರ್, 79 ಕೋಟಿ ರೂ.ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದ ಮಲ್ಟಿ ಲೆವೆಲ್ ಪಾರ್ಕಿಂಗ್ ಯೋಜನೆಯ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ಕ್ಲಾಕ್ ಟವರ್ ಮೇಯರ್ ಬಯಕೆ !
ಹಳೆ ಕ್ಲಾಕ್ ಟವರ್ ಇದ್ದ ಜಾಗದಲ್ಲಿ ಅದೇ ಮಾದರಿಯಲ್ಲಿ ಹೊಸ ಕ್ಲಾಕ್ ಟವರ್ ನಿರ್ಮಿಸುವುದು ನನ್ನ ಬಯಕೆಯಾಗಿತ್ತು. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಗೆ ಅದನ್ನು ಸೇರ್ಪಡೆ ಮಾಡಲಾಗಿದೆ. ಹಳೆ ಕ್ಲಾಕ್ ಟವರ್ ಮಾದರಿಯಲ್ಲಿ 21 ಮೀಟರ್ ಉದ್ದದ ಹೊಸ ಟವರ್ ನಿರ್ಮಾಣವಾಗಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.







