ನಳಂದಾ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದ 98ರ ಅಜ್ಜ!

ಪಾಟ್ನಾ,ಡಿ.27: ಬಿಹಾರದ ನಳಂದಾ ಮುಕ್ತ ವಿವಿಯ 12ನೇ ವಾರ್ಷಿಕ ಘಟಿಕೋತ್ಸವದಲ್ಲಿ 98ರ ವಯೋವೃದ್ಧರಾದ ರಾಜಕುಮಾರ ವೈಶ್ ಅವರು ಸ್ನಾತಕೋತ್ತರ ಪದವಿಯನ್ನು ಸ್ವೀಕರಿಸುವ ಮೂಲಕ ಅಪರೂಪದ ಸಾಧನೆಯನ್ನು ಮೆರೆದಿದ್ದಾರೆ.
2015ರಲ್ಲಿ ಎಂ.ಎ(ಅರ್ಥಶಾಸ್ತ್ರ) ಕೋರ್ಸ್‌ಗೆ ದಾಖಲಾಗಿದ್ದ ವೈಶ್ ಮೇಘಾಲಯದ ರಾಜ್ಯಪಾಲ ಗಂಗಾ ಪ್ರಸಾದ್ ಅವರಿಂದ ಸ್ನಾತಕೋತ್ತರ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಪಾಟ್ನಾದಲ್ಲಿ ಪದವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಂತಸವನ್ನು ಹಂಚಿಕೊಂಡ ವೈಶ್, ತಾನು ಕಠಿಣ ಪರಿಶ್ರಮ ಪಟ್ಟಿದ್ದೇನೆ. ಸ್ನಾತಕೋತ್ತರ ಕೋರ್ಸ್ ಮುಗಿಸುವ ತನ್ನ ಕನಸನ್ನು ನನಸಾಗಿಸಿದ್ದೇನೆ. ಯುವಜನರು ವೃತ್ತಿಯ ಮೇಲೆ ಮಾತ್ರವಲ್ಲ, ತಮ್ಮ ಶಿಕ್ಷಣದ ಬಗ್ಗೆಯೂ ಗಮನವನ್ನು ಕೇಂದ್ರೀಕರಿಸಬೇಕು ಎಂದರು.
ವೈಶ್ ಅವರನ್ನು ಪ್ರಶಂಸಿಸಿದ ವಿವಿಯ ಕುಲಸಚಿವ ಎಸ್.ಪಿ.ಸಿನ್ಹಾ ಅವರು, ವಿವಿಯ ಪಾಲಿಗೆ ಇದೊಂದು ದೊಡ್ಡ ಸಾಧನೆಯಾಗಿದೆ. ಯುವಜನರಿಗೆ ಸ್ಫೂರ್ತಿಯ ಮೂಲವಾಗಿ ಅವರ ನೋಟ್‌ಬುಕ್‌ಗಳನ್ನು ವಿವಿಯು ಕಾಯ್ದಿರಿಸಲಿದೆ ಎಂದರು.
ಘಟಿಕೋತ್ಸವದಲ್ಲಿ ಮೆಟ್ಟಿಲುಗಳನ್ನು ಹತ್ತುವುದು ಕಷ್ಟಕರವಾಗಿದ್ದರಿಂದ ತನ್ನ ತಂದೆಗೆ ಗಾಲಿಖುರ್ಚಿ ನೀಡಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಅವರು ವಾಕರ್ ನೆರವಿನಿಂದ ವೇದಿಕೆಗೆ ತೆರಳಿ ಪದವಿಯನ್ನು ಸ್ವೀಕರಿಸಿದರು ಎಂದು ಜೈಶ್ ಪುತ್ರ, ಎನ್‌ಐಟಿ ಪಾಟ್ನಾದ ನಿವೃತ್ತ ಪ್ರೊಫೆಸರ್ ಸಂತೋಷ್ ಕುಮಾರ್ ತಿಳಿಸಿದರು.
1938ರಲ್ಲಿ ಆಗ್ರಾ ವಿವಿಯಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ವೈಶ್ 1940ರಲ್ಲಿ ಕಾನೂನು ಪದವಿಯನ್ನು ಪಡೆದಿದ್ದರು. ಕೊಡೆರ್ಮಾದ ಕ್ರಿಶ್ಚಿಯನ್ ಮೈಕಾ ಇಂಡಸ್ಟ್ರಿಯಲ್ಲಿ ಕಾನೂನು ಅಧಿಕಾರಿಯಾಗಿ ಸೇವೆಗೆ ಸೇರಿದ್ದ ಅವರು 1980ರ ದಶಕದಲ್ಲಿ ಜನರಲ್ ಮ್ಯಾನೇಜರ್ ಹುದ್ದೆಯಿಂದ ನಿವೃತ್ತರಾಗಿದ್ದರು.







