ದೇವದಾಸಿ ಪದ್ಧತಿಗೆ ಕಡಿವಾಣ ಹಾಕಲು ಸಮಗ್ರ ನೀತಿ ಜಾರಿಯಾಗಲಿದೆ: ಲೀನಾ
ಬೆಂಗಳೂರು, ಡಿ.27: ಕರ್ನಾಟಕದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ದೇವದಾಸಿಯರಿದ್ದು, ಇವರಿಗೆ ಪ್ರತ್ಯೇಕ ಆರೋಗ್ಯ ವಿಮೆ ಹಾಗೂ ಈ ದೇವದಾಸಿಯರ ಮಕ್ಕಳಿಗೆ ಶೇ.3ರಷ್ಟು ಮೀಸಲಾತಿ, ಮಾಸಾಶನ ಹೆಚ್ಚಳದ ಬಗ್ಗೆ ಸಮಗ್ರ ಪುನರ್ವಸತಿ ನೀತಿ ರೂಪಿಸಲಾಗುತ್ತಿದೆ ಎಂದು ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಲೀನಾ ಹೇಳಿದ್ದಾರೆ.
ಬುಧವಾರ ಜ್ಞಾನ ಜ್ಯೋತಿ ಸಭಾಂಗಣದ ಬೋರ್ಡ್ ರೂಮ್‌ನಲ್ಲಿ ತಳಸಮುದಾಯದ ಅಧ್ಯಯನ ಕೇಂದ್ರ ಆಯೋಜಿಸಿದ್ದ ದೇವದಾಸಿ ತಾಯಂದಿರ ಮತ್ತು ಮಕ್ಕಳ ಸಹಭಾಗಿತ್ವದಲ್ಲಿ ಅಧ್ಯಯನ ಮತ್ತು ಸಮಗ್ರ ಪುನರ್ವಸತಿ ನೀತಿ ರೂಪಿಸುವ ರಾಜ್ಯಮಟ್ಟದ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
1982ರಲ್ಲಿ ದೇವದಾಸಿ ಪದ್ಧತಿ ನಿಷೇಧ ಕಾಯಿದೆ ಜಾರಿಗೆ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ದೇವದಾಸಿಯರಿಗೆ ಹಾಗೂ ಅವರ ಮಕ್ಕಳಿಗೆ ರಾಜ್ಯ ಸರಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢರನ್ನಾಗಿಸಿದೆ. ಹೀಗಾಗಿ, ಇನ್ನು ಮುಂದೆಯೂ ಈ ದೇವದಾಸಿಯರಿಗೆ ಪ್ರತ್ಯೇಕ ಆರೋಗ್ಯ ವಿಮೆ ಹಾಗೂ ಇವರ ಮಕ್ಕಳಿಗೆ ಶೇ.3ರಷ್ಟು ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
2007ರ ಸರಕಾರಿ ವರದಿ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 4724 ದೇವದಾಸಿಯರು, ವಿಜಯಪುರದಲ್ಲಿ 4103, ಬಾಗಲಕೋಟೆ 7827, ರಾಯಚೂರು 3949, ಕೊಪ್ಪಳ 6035, ಹಾವೇರಿ 990, ಗದಗ 2900, ಬಳ್ಳಾರಿ 9733, ಕಲಬುರ್ಗಿ 1445, ಯಾದಗಿರಿ 1169, ಚಿತ್ರದುರ್ಗ 406, ಶಿವಮೊಗ್ಗ 24, ದಾವಣಗೆರೆ 2592, ಧಾರವಾಡ 763 ದೇವದಾಸಿ ತಾಯಂದಿರಿದ್ದಾರೆ. ಈ ದೇವದಾಸಿ ತಾಯಂದಿರಿಗೆ ಪ್ರತಿ ತಿಂಗಳು 1 ಸಾವಿರ ರೂ.ಮಾಶಾಸನ ನೀಡುತ್ತಿದ್ದು, ಈ ಮಾಶಾಸನ ಹೆಚ್ಚಳ ಆಗುವ ಅವಶ್ಯಕತೆ ಇದೆ. ಹಾಗೂ ಇವರ ಮಕ್ಕಳಿಗೆ ಉಚಿತ ಶಿಕ್ಷಣ, ಮೀಸಲಾತಿ, ಆರೋಗ್ಯ ಭಾಗ್ಯ ಕಲ್ಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ತಳಸಮುದಾಯಗಳ ಅಧ್ಯಯನ ಕೇಂದ್ರದ ರಾಷ್ಟ್ರೀಯ ಕಾನೂನು ಶಾಲೆಯ ಸಂಚಾಲಕ ಪ್ರೊ.ಪ್ರದೀಪ್ ರಮಾವತ್ ಮಾತನಾಡಿ, ಎಸ್ಸಿ, ಎಸ್ಟಿ ಹಾಗೂ ಓಬಿಸಿ ಜನಾಂಗದವರೆ ಹೆಚ್ಚಾಗಿ ದೇವದಾಸಿಯರಾಗಿದ್ದು, ಈ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಲು ಸಮಗ್ರ ಪುನರ್ವಸತಿ ನೀತಿ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ವಿವಿಯ ಕುಲಪತಿ ಪ್ರೊ.ಎಸ್.ಜಾಫೆಟ್, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಮುಖಂಡೆ ಪಡಿಯಮ್ಮ, ದೇವದಾಸಿ ಸಂಪನ್ಮೂಲ ಕೇಂದ್ರದ ಸಲಹೆಗಾರ ಪ್ರೊ.ವೈ.ಜೆ.ರಾಜೇಂದ್ರ, ತಳಸಮುದಾಯಗಳ ಅಧ್ಯಯನ ಕೇಂದ್ರದ ಸಂಶೋಧನಾ ಸಲಹೆಗಾರ ಡಾ.ಆರ್.ವಿ.ಚಂದ್ರಶೇಖರ್ ಉಪಸ್ಥಿತರಿದ್ದರು.







