ದೇಶದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗುತ್ತಿರುವ ಮಕ್ಕಳ ಸಂಖ್ಯೆಯೆಷ್ಟು ಗೊತ್ತಾ ?
ಸಮೀಕ್ಷೆಯಿಂದ ಆಘಾತಕಾರಿ ಮಾಹಿತಿ ಬಹಿರಂಗ

ಹೊಸದಿಲ್ಲಿ, ಡಿ.27: ದೇಶದಲ್ಲಿ ಶೇ.53ರಷ್ಟು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಕೇಂದ್ರ ಸರಕಾರ ಪ್ರಾಯೋಜಿತ ಸಮೀಕ್ಷಾ ವರದಿಯಲ್ಲಿ ತಿಳಿದುಬಂದಿದೆ.
ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ ಸಹಾಯಕ ಗೃಹ ಸಚಿವ ಹಂಸರಾಜ್ ಆಹಿರ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯು ಮಕ್ಕಳ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಸಿದ್ದು, 13 ರಾಜ್ಯಗಳ ಸುಮಾರು 13,000 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ಶೇ.53ರಷ್ಟು ಮಕ್ಕಳು ಒಂದು ಅಥವಾ ಹೆಚ್ಚಿನ ರೀತಿಯಲ್ಲಿ ಲೈಂಗಿಕ ಕಿರುಕುಳ ಅನುಭವಿಸುತ್ತಿರುವ ಬಗ್ಗೆ ತಿಳಿಸಿದ್ದರೆ, ಶೇ.21.90ರಷ್ಟು ಮಕ್ಕಳು ಗಂಭೀರ ಪ್ರಮಾಣದ ಲೈಂಗಿಕ ಕಿರುಕುಳ, ಶೇ.50.76ರಷ್ಟು ಮಕ್ಕಳು ಇತರ ರೀತಿಯ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಸಚಿವರು ತಿಳಿಸಿದರು. ಶೇಕಡಾ 50ರಷ್ಟು ಪ್ರಕರಣಗಳಲ್ಲಿ ಕಿರುಕುಳ ನೀಡುವ ವ್ಯಕ್ತಿ ಮಗುವಿನ ಪರಿಚಿತನಾಗಿರುತ್ತಾನೆ ಮತ್ತು ಘಟನೆಯನ್ನು ಮಕ್ಕಳು ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಬೀದಿ ಬದಿ ವಾಸಿಸುತ್ತಿರುವ ಮಕ್ಕಳು, ಹಾಸ್ಟೆಲ್ ಮತ್ತಿತರ ಕಡೆ ನೆಲೆಸಿರುವ ಮಕ್ಕಳ ಮೇಲೆ ಅತ್ಯಂತ ಹೆಚ್ಚು ಲೈಂಗಿಕ ಹಲ್ಲೆ ನಡೆಯುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಅಸ್ಸಾಂ, ಮಿಝಾರಾಂ, ಗೋವಾ, ದಿಲ್ಲಿ, ರಾಜಸ್ತಾನ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಮತ್ತು ಕೇರಳದಲ್ಲಿ ಸಮೀಕ್ಷೆ ನಡೆಸಲಾಗಿದೆ.





